

ಲಕ್ಷ್ಮೇಶ್ವರ: ಸಮೀಪದ ಗೊಜನೂರು ಗ್ರಾಮದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಆಶ್ರಯ ನಿವೇಶನಗಳ ಸಮಸ್ಯೆಗೆ ಮುಕ್ತಿ ದೊರಕಿದ್ದು, ಶನಿವಾರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
168 ಜನರಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ನಿವೇಶನಗಳ ಹಕ್ಕುಪತ್ರ ದೊರೆಯಲು ಅಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ಮಂಡಳಿಯ ಶ್ರಮ ಕಾರಣ. ಸ್ವಂತ ನಿವೇಶನ ಹೊಂದಬೇಕು ಎನ್ನುವ ಕನಸು ನನಸಾಗಿದೆ. 25 ವರ್ಷಗಳಿಂದ ನಿವೇಶನ ಹೊಂದುವ ಕನಸು ಹೊತ್ತಿದ್ದ ನಿವೇಶನರಹಿತರ ಕನಸನ್ನು ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಶ್ರಮವಹಿಸಿ ಸಾಕಾರಗೊಳಿಸಿದ್ದಾರೆ. ಅಧಿಕಾರಿಗಳಲ್ಲಿ ಜನಪರ ಇದ್ದರೆ ಜನರ ಕಣ್ಣೀರು ಒರೆಸುವ ಕೆಲಸ ಸಾಧ್ಯ ಎಂಬುದನ್ನು ಅಧಿಕಾರಿಗಳು ಮಾಡಿ ತೋರಿಸಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಹೇಗೆ ಪರಿಹರಿಸಲು ಸಾಧ್ಯ ಎಂಬುದನ್ನು ಅರಿತು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಕ್ಕುಪತ್ರ ವಿತರಣೆಯನ್ನು ಕೆಲವೇ ದಿನಗಳಲ್ಲಿ ಈಡೇರಿದೆ ಎಂದರು.
ತಹಸೀಲ್ದಾರ್ ಆನಂದಶೀಲ, ಗ್ರಾಪಂ ಸದಸ್ಯ ಮಂಜುನಾಥ ಚಲುವಾದಿ, ಗ್ರಾಪಂ ಮಾಜಿ ಸದಸ್ಯ ಎಸ್.ಡಿ. ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನೀಲವ್ವ ಮಾದರ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ಸದಸ್ಯರಾದ ನೀಲವ್ವ ಪಾಟೀಲ, ಸುಶೀಲವ್ವ ತಳವಾರ, ನೀಲಪ್ಪ ಗುಡ್ಡಣ್ಣವರ, ಗಂಗಾಧರ ಕರಿನಿಂಗಣ್ಣವರ, ದ್ಯಾಮವ್ವ ಮೆಣಸಿನಕಾಯಿ, ಫಾತಿಮಾ ಮುಲ್ಲಾನವರ, ಗೀತಾ ಪುರದ, ಪುಟ್ಟವ್ವ ಲಮಾಣಿ, ಚಿನ್ನಕ್ಕ ಲಮಾಣಿ, ಮಹಾಂತಪ್ಪ ಹರಿಜನ, ಪಿಡಿಒ ಶಿವಾನಂದ ಮಾಳವಾಡ, ಹೋರಾಟಗಾರ ಚೇತನ ಕಣವಿ, ಶಂಭು ಸೊರಟೂರ, ರಮೇಶ ದನದಮನಿ, ಸಿ.ಡಿ. ಪಾಟೀಲ, ಚನ್ನಪ್ಪ ಷಣ್ಮುಖಿ, ಹನಮಂತಗೌಡ ಪಾಟೀಲ ಇದ್ದರು.