ಗದಗ ಜಿಲ್ಲೆ ಪಾರ್ಶ್ವನಾಥ ಶಾಲೆಗೆ ಜಯ

25 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಂಗ ಸಂಸ್ಥೆ ರಾಜೀವಗಾಂಧಿ ಸಿಬಿಎಸ್‌ಇ ಮಹಾ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 14 ವರ್ಷದೊಳಗಿನ ಉತ್ತರ ಕರ್ನಾಟಕದ ಅಂತರಶಾಲಾ ಕಬಡ್ಡಿ ಪಂದ್ಯಾವಳಿಯಲ್ಲಿ ಗದಗ ಶ್ರೀ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆ ಜಯಗಳಿಸಿದೆ.
ಸೆಣಸಾಡಿದ ಹುಲಕೋಟಿಯ ರಾಜರಾಜೇಶ್ವರಿ ವಿದ್ಯಾನಿಕೇತನ ಹಾಗೂ ಶ್ರೀ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆ ತಂಡಗಳ ಮಧ್ಯೆ ನಡೆದ ಅಂತಿಮ ಪಂದ್ಯ ಅತ್ಯಂತ ತುರುಸಿನಿಂದ ಕೂಡಿತ್ತು. ಮೊದಲಾರ್ಧದಲ್ಲಿ 30 ಅಂಕಗಳ ಮುನ್ನಡೆ ಸಾಧಿಸಿದ್ದ ಪಾರ್ಶ್ವನಾಥ ಶಾಲೆ ತಂಡ, ದ್ವಿತೀಯಾರ್ಧದಲ್ಲಿ ಸಹ ಉತ್ತಮ ಆಟ ಪ್ರದರ್ಶಿಸಿ 50 ಅಂಕಗಳನ್ನು ಪಡೆದು ಜಯಗಳಿಸಿತು. ರಾಜರಾಜೇಶ್ವರಿ ತಂಡ ರನ್‌ರಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಒಟ್ಟು 8 ಪಂದ್ಯಗಳು ನಡೆದಿದ್ದು, ಸೆಮಿಫೈನಲ್ ಹಂತಕ್ಕೆ ರಾಜರಾಜೇಶ್ವರಿ ವಿದ್ಯಾ ನಿಕೇತನ, ಬಾಲ ವಿನಾಯಕ ವಿದ್ಯಾನಿಕೇತನ, ಧಾರವಾಡದ ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಗಳು ತಲುಪಿದ್ದವು.
ಇದಕ್ಕೂ ಪೂರ್ವದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಈರೇಶ ಅಂಚಟಗೇರಿ, ಇಂದಿನ ಮಕ್ಕಳಿಗೆ ದೈಹಿಕ, ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಶಿಂಧೋಗಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ವಿಶೇಷ ಕಾರ್ಯದರ್ಶಿ ಎಸ್.ಬಿ. ಹಿಂಚಿಗೇರಿ, ಕಾರ್ಯದರ್ಶಿ ಎಸ್. ರಾಧಾಕೃಷ್ಣನ್, ಪ್ರಾಂಶುಪಾಲೆ ಸುರೇಖಾ ಚಾಂದಗುಡೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net