

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಅರೆಭಾಷಿಕ ಗೌಡ ಜನಾಂಗದವರಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾಗಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಸಿಬಿ ಮತ್ತು ಟೀಂ ಭಗವತಿ ತಂಡ ಗೆಲುವು ಸಾಧಿಸಿತು.
ದಿನ ಮೊದಲ ಪಂದ್ಯದಲ್ಲಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ಮತ್ತು ಮಡಿಕೇರಿ ಚಾಂಪಿಯನ್ ಭಾವ(ಎಂಸಿಬಿ) ತಂಡಗಳ ನಡುವೆ ನಡೆಯಿತು. ಟಾಸ್ ಸೋತ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ ನಿಗದಿತ ೧೦ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೬೭ ರನ್ ಕಲೆ ಹಾಕಿತು. ತಂಡದ ಪರ ಜೆ.ಪಿ.ಪ್ರಕ್ಯಾತ್ ಅಯ್ಯಪ್ಪ ೨೪ ಎಸೆತದಲ್ಲಿ ೧ ಸಿಕ್ಸರ್ ನೊಂದಿಗೆ ೨೨ ರನ್ ಕಲೆ ಹಾಕಿದರು. ತುಷಾರ್ ೨೨ ಎಸೆತದಲ್ಲಿ ೨೫ ರನ್ ದಾಖಲಿಸಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮವಹಿಸಿದರು. ಎಂಸಿಬಿ ಪರ ಮದನ್ ೨ ಓವರ್‌ನಲ್ಲಿ ೧೪ ರನ್ ನೀಡಿ ೨ ವಿಕೆಟ್ ಕಬಳಿಸಿದರೆ, ಡಾ.ಕುಶ್ವಂತ್ ಕೋಳಿಬೈಲು ಹಾಗೂ ಹರ್ಷ ಕೊಂಬಾರನ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಗುರಿಬೆನ್ನಟ್ಟಿದ ಎಂಸಿಬಿ ತಂಡ ೯.೫ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ತಂಡದ ಪರ ಡಾ.ಕುಶ್ವಂತ್ ಕೋಳಿಬೈಲು ೧೯ ಎಸೆತದಲ್ಲಿ ೨ ಬೌಂಡರಿ ನೆರವಿನೊಂದಿಗೆ ೨೧ ರನ್ ದಾಖಲಿಸಿದರೆ, ಮದನ್ ಯಾಲದಾಳು ೧೨, ಹರ್ಷ ಕೊಂಬಾರನ ೯ರನ್ ಕಲೆ ಹಾಕಿ ತಂಡದ ಗೆಲುವಿಗೆ ಕಾರಣರಾದರು. ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡದ ಪರ ತಮ್ಮಣ್ಣ ಹುದೇರಿ ೨ ಓವರ್‌ನಲ್ಲಿ ೧ ರನ್ ನೀಡಿ ೨ ವಿಕೆಟ್ ಕಬಳಿಸಿದರೆ, ತುಷಾರ್ ಏಕೈಕ ವಿಕೆಟ್ ಪಡೆದರು. ತೀವ್ರ ಹಣಾಹಣಿ ನೀಡಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ ಎಂಸಿಬಿ ವಿರುದ್ಧ ಶರಣಾಯಿತು. ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿಯನ್ನು ಎಂಸಿಬಿ ತಂಡದ ಡಾ.ಕುಶ್ವಂತ್ ಕೋಳಿಬೈಲು ಪಡೆದುಕೊಂಡರು.
ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ಕ್ಷೇತ್ರ ರಕ್ಷಣೆಗೆ ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಟೀಂ ಭಗವತಿ ನಿಗದಿತ ೧೦ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೧೧೩ ರನ್ ಕಲೆ ಹಾಕಿತ್ತು. ತಂಡದ ಪರ ಚೇತನ್ ಕಲ್ಲುಗುಂಡಿ ೨೬ ಎಸೆತದಲ್ಲಿ ೨೦ ರನ್ ಕಲೆ ಹಾಕಿದರೆ, ಬಿ.ಡಿ.ವರುಣ್ ರಾಜ್ ೨೧ ಎಸೆತದಲ್ಲಿ ೨ ಸಿಕ್ಸರ್, ೫ ಬೌಂಡರಿ ನೆರವಿನೊಂದಿಗೆ ೪೧ ಹಾಗೂ ಜಗತ್ ದಂಬೆಕೋಡಿ ೧೨ ಎಸೆತದಲ್ಲಿ ೧ ಸಿಕ್ಸರ್, ೨ ಬೌಂಡರಿ ನೆರವಿನೊಂದಿಗೆ ೧೮ರನ್‌ಗಳ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡದ ಪರ ಎಂ.ಜಿ.ವೈಶಾಕ್, ದೀಕ್ಷಿ ಮೂಲೆಮಜಲು ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಗುರಿಬೆನ್ನಟ್ಟಿದ ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೧೧೦ ರನ್ ದಾಖಲಿಸಿ ೩ ರನ್‌ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತ್ತು. ಆರಂಭದಿಂದಲು ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ತಂಡಕ್ಕೆ ಬಿ.ಡಿ.ವರುಣ್ ರಾಜ್ ಯತೀಶ್‌ರವರ ವಿಕೆಟ್ ಪಡೆಯುವುದರ ಮೂಲಕ ಮೊದಲ ಆಘಾತ ನೀಡಿದರು. ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ಪರ ಯತೀಶ್ ೨೪ ಎಸೆತದಲ್ಲಿ ೩ ಸಿಕ್ಸರ್, ೫ ಬೌಡಂರಿ ನೆರವಿನೊಂದಿಗೆ ೪೪ ರನ್ ಕಲೆ ಹಾಕಿದರೆ, ರಾಕೇಶ್ ೩೩ ಎಸೆತದಲ್ಲಿ ೨ ಸಿಕ್ಸರ್, ೩ ಬೌಂಡರಿ ನೆರವಿನೊಂದಿಗೆ ೪೫ ರನ್ ದಾಖಲಿಸಿದರು. ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ ಬೇಕಾಗಿದ್ದ ೧೯ರನ್ ಬೆನ್ನಟ್ಟಿದ ರಾಕೇಶ್ ಹಾಗೂ ರಂಜು ೧೫ ರನ್ ಬಾರಿಸಿ ೩ ರನ್‌ಗಳ ಹಿನ್ನೆಡೆ ಅನುಭವಿಸಿದರು. ಪರಿಣಾಮ ಟೀಂ ಭಗವತಿ ತಂಡ ೩ ರನ್‌ಗಳಿಂದ ಗೆಲುವು ಸಾಧಿಸಿತು. ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿಯನ್ನು ಟೀಂ ಭಗವತಿ ತಂಡದ ಬಿ.ಡಿ.ವರುಣ್ ರಾಜ್ ಪಡೆದುಕೊಂಡರು.