

ಮಡಿಕೇರಿ:
ಚೆಟ್ಟಳ್ಳಿ ವಿವಿಧ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂದಿನ ಅವಧಿಗೆ ಆಡಳಿತ ಚುಕ್ಕಾಣಿ ತನ್ನ ವಶಕ್ಕೆ ಪಡೆದುಕೊಂಡಿದೆ. ಭಾನುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೊಂಗೇಟಿರ ವಾಣಿಕಾಳಪ್ಪ, ಮುಳ್ಳಂಡ ಮಾಯಮ್ಮ, ಪಿ.ಟಿ. ಗಣೇಶ್, ಜೆ.ಅರ್. ರವಿ, ಬಿ.ಎಂ. ಕಾಶಿ, ಪೇರಿಯನ ಪೂಣಚ್ಚ ಹಾಗೂ ಮರದಾಳು ಚೇತನ್ ಅವಿರೋಧ ಆಯ್ಕೆ ಆದರು.
ಬಲ್ಲಾರಂಡ ಮಣಿ ಉತ್ತಪ್ಪ(೪೯೭), ಶಿವುನಂಜಪ್ಪ ಪುತ್ತರಿರ (೪೭೩),ವೇಣುಗೋಪಾಲ ಬಟ್ಟೀರ(೪೬೫) ದಯಾನಂದ ಅಕ್ಕಾರಿ(೪೦೬), ಪ್ರಜ್ವಲ್ ಕಣರ್ಯ್ಯನ (೪೨೨) ತೀರ್ಥ ಕುಮಾರ್ ಚೆಟ್ಟೋಳಿರ (೧೨೩), ತಿಮ್ಮಯ್ಯ ಪುತ್ತರಿರ(೧೧೦) ಚುನಾವಣೆಯಲ್ಲಿ ಜಯಗಳಿಸಿದರು.
ಮಣಿ ಉತ್ತಪ್ಪನವರ ತಂಡ ಗೆಲುವು ಸಾಧಿಸಿಸುವ ಮೂಲಕ ೪ನೇ ಬಾರಿಗೆ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಲಿದ್ದಾರೆ. ಇವರು ೨೬ ವರ್ಷಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಇವರ ಅವಧಿಯಲ್ಲಿ ಚೆಟ್ಟಳ್ಳಿ ಸಹಕಾರ ಸಂಘದ ನೂತನ ಕಟ್ಟಡ, ವಿಶ್ವಗುರು ಶ್ರೀ ನರೇಂದ್ರಮೋದಿ ಸಹಕಾರಭವನ, ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರ, ಮಣ್ಣು ಪರೀಕ್ಷಾ ಘಟಕ, ಕುಡಿಯುವ ನೀರಿನ ಘಟಕ, ಈರಳೆ ಶಾಖೆಯ ಅಭಿವೃದ್ಧಿ, ಸಂಘದಲ್ಲಿ ವಿವಿಧ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತಿತರ ಕಾರ್ಯಗಳು ನಡೆದಿದೆ.
ರಾಜ್ಯದಲ್ಲೇ ಮಾದರಿ ಸಹಕಾರ ಸಂಘವೆಂಬ ಹೆಗ್ಗಳಿಕೆಗೆ ಚೆಟ್ಟಳ್ಳಿ ಸಹಕಾರ ಸಂಘ ಪಾತ್ರವಾಗಿದೆ.
ಫಲಿತಾಂಶದ ನಂತರ ಮಾತನಾಡಿದ ಮಣಿ ಉತ್ತಪ್ಪ, ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಗೆಲುವು ಸಾಧಿಸಲು ಕಾರಣಕರ್ತರಾದ ಸಂಘದ ಸದಸ್ಯರಿಗೆಲ್ಲಾ ಕೃತಜ್ಞತೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳಿದರು.
ಚುನಾವಣಾ ಅಧಿಕಾರಿಗಳಾಗಿ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಪಿಡಿಒ ವಿ.ಜಿ. ಲೊಕೇಶ್,ಉಪಚುನಾವಣಾಧಿಕಾರಿಗಳಾಗಿ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ ಎನ್. ಎಸ್. ಹಾಗು ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ನಂದಿನಿ ಕಾರ್ಯನಿವಹಿಸಿದರು.