ಜ್ಞಾನೇಶ್ವರ ಜಮದಾಡೆಗೆ ಗೆಲುವು

Victory for Dnaneshwar Jamadade
ಮಹಾಲಿಂಗಪುರದ ಮಹಾಲಿಂಗೇಶ್ವರ ಜಾತ್ರೆ ನಿಮಿತ್ತ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಗೆಲುವಿನ ನಗೆ ಬೀರಿದ ನೇಪಾಳದ ದೇವತಾಪಾ.
Published on

ಮಹಾಲಿಂಗಪುರ: ಮಹಾಲಿಂಗೇಶ್ವರ ಜಾತ್ರೆ ನಿಮಿತ್ತ ಸಂಜೆ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಮಹಾನ್ ಭಾರತ ಕೇಸರಿ ಜ್ಞಾನೇಶ್ವರ ಜಮದಾಡೆ ಗೆಲುವು ಸಾಧಿಸಿ ಬಹುಮಾನ ತಮ್ಮದಾಗಿಸಿಕೊಂಡರು.

ಮಧ್ಯಪ್ರದೇಶದ ಕೇಸರಿ ಹರಿಯಾಣದ ದೀಪಕಕುಮಾರ ಅವರೊಂದಿಗೆ ತೀವ್ರ ಸೆಣಸಾಟ ನಡೆಸಿದ ಪೈಲ್ವಾನ ಜ್ಞಾನೇಶ್ವರ ಜಮದಾಡೆ ಕುಸ್ತಿ ನಿಕಾಲಿ ಮಾಡಿ ಸಂಭ್ರಮಿಸಿದರು. ತೀವ್ರ ಕುತೂಹಲ ಕೆರಳಿಸಿದ ಮತ್ತೊಂದು ಕುಸ್ತಿಯಲ್ಲಿ ಮಧ್ಯಪ್ರದೇಶದ ಅಮಿತ್‌ಕುಮಾರ ಅವರನ್ನು ನೇಪಾಳದ ದೇವತಾಪ ಸೋಲಿಸಿದರು. ಪಂಜಾಬ್ ಕೇಸರಿ ಜೋಗಿಂದರ ಅವರನ್ನು ದಾವಣಗೆರೆ ಡಬಲ್ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ, ಪುಣೆಯ ಆದಿತ್ಯ ಪಾಟೀಲ ಅವರನ್ನು ಉಪಕರ್ನಾಟಕ ಕೇಸರಿ ಶಿವಾನಂದ ನಿರ್ವಾನಟ್ಟಿ ಹಾಗೂ ಹರಿಯಾಣದ ಲುಸನ್ ಭಾಗವತ ಅವರನ್ನು ಕರ್ನಾಟಕ ಕೇಸರಿ ನಾಗರಾಜ ಬಸಿಡೋನಿ ಸೋಲಿಸಿದರು.

ಮಹಿಳಾ ಕುಸ್ತಿ : ಬೆಳಗಾವಿಯ ಕ್ರೀಡಾ ಶಾಲೆಯ ಪ್ರೀತಿ ಚಿಕ್ಕೋಡಿ ಹಾಗೂ ಮಹಾಲಿಂಗಪುರದ ಮುಸ್ಮಾನ ನದಾಫ್ ಅವರ ಮಧ್ಯೆ ನಡೆದ ಏಕೈಕ ಮಹಿಳಾ ಕುಸ್ತಿ ಪಂದ್ಯ ನಿಕಾಲಿಯಾಗದೆ ಸಮಬಲ ಲಿತಾಂಶ ಘೋಷಿಸಲಾಯಿತು.

ರಾಜ್ಯ ಅಂತರಾಜ್ಯ ಮಟ್ಟದ ಖ್ಯಾತ ಕುಸ್ತಿ ಪಟುಗಳು ಆಗಮಿಸಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ಅಖಾಡದಲ್ಲಿ ಕುಸ್ತಿ ಪಟುಗಳು ತೊಡೆ ತಟ್ಟಿ ಶೆಡ್ಡು ಹೊಡೆದು ಒಬ್ಬರಿಗೊಬ್ಬರು ಸೆಣಸಾಡುತ್ತಿದ್ದರೆ ಇತ್ತ ಪ್ರೇಕ್ಷಕರ ಗ್ಯಾಲರಿಯಿಂದ ಶಿಳ್ಳೆ, ಕೂಗಾಟ, ಜೈಕಾರ, ಚಪ್ಪಾಳೆ ಸದ್ದು ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿತ್ತು. ತಮ್ಮಲ್ಲಿರುವ ನಾನಾ ಪಟ್ಟುಗಳನ್ನು ಪ್ರದರ್ಶಿಸಿ ಎದುರಾಳಿಯನ್ನು ಮಣ್ಣು ಮುಕ್ಕಿಸುವ ತವಕದ ದಶ್ಯವನ್ನು ಕಂಡು ಪ್ರೇಕ್ಷಕರು ಕೇಕೆ ಹಾಕಿ ಖುಷಿ ಪಟ್ಟರು. ಸಂಜೆ ನಾಲ್ಕು ಗಂಟೆಗೆ ಆರಂಭಗೊಂಡ ಕುಸ್ತಿಗಳು ತಡ ರಾತ್ರಿ ಎಂಟು ಗಂಟೆವರೆಗೆ ನಡೆದವು. ಒಟ್ಟು 46 ಕುಸ್ತಿ ಪಂದ್ಯಗಳು ನಡೆದವು.

ಪ್ರತಿ ವರ್ಷ ಜಾತ್ರೆಯ ಮರು ರಥೋತ್ಸವದಂದು ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯನ್ನು ಈ ಬಾರಿ ಮರು ರಥೋತ್ಸವದ ಮರುದಿನ ಆಯೋಜಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಪ್ರೇಮಿಗಳು ಬಂದು ಪಂದ್ಯಾವಳಿ ವೀಕ್ಷಿಸಲು ಅನುಕೂಲವಾಯಿತು.

ಕೆಟ್ಟ ಹವ್ಯಾಸಗಳಿಂದ ದೂರ ಉಳಿಯಬಹುದು

ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿದ್ದು ಸವದಿ, ಕುಸ್ತಿ ಆಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಅರೋಗ್ಯದಿಂದ ಇರಲು ಸಾಧ್ಯ. ಆಟ ಆಡುವುದರಿಂದ ಕೆಟ್ಟ ಹವ್ಯಾಸಗಳಿಂದ ದೂರ ಉಳಿಯಬಹುದು. ತಾವು ಚಿಕ್ಕವರಿದ್ದಾಗ ಗರಡಿ ಮನೆಗೆ ಹೋದ ಪ್ರಸಂಗವನ್ನು ಸ್ಮರಿಸಿಕೊಂಡರು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಮಾತನಾಡಿ, ಕುಸ್ತಿಯಲ್ಲಿ ವ್ಯಕ್ತಿಯ ಶಕ್ತಿ ಮತ್ತು ಯುಕ್ತಿಗಳ ಪ್ರದರ್ಶಿತವಾಗುತ್ತದೆ. ಭಾರತದಲ್ಲಿ ಕುಸ್ತಿ ಅತ್ಯಂತ ಪುರಾತನವಾದದ್ದು, ನಮ್ಮ ದೇಶದ ಎರಡು ಮಹಾ ಕಾವ್ಯಗಳಾದ ರಾಮಾಯಣ ಮಹಾಭಾರತ ಕಾವ್ಯಗಳಲ್ಲಿ ಕುಸ್ತಿಪಟುಗಳ ಸಾಹಸ ತುಂಬಿದೆ. ರಾಮಾಯಣದ ಹನುಮಂತ, ವಾಲಿ, ಸುಗ್ರಿವ್ ಯಾರಿಗೂ ಜಗ್ಗದಿರುವ ಕುಸ್ತಿಪಟುಗಳಾಗಿದ್ದರು. ಭೀಮ ಮತ್ತು ಜರಾಸಂಧ ಇವರಿರ್ವರಿಗೂ ನಡೆದ ಕುಸ್ತಿ ಅವಿಸ್ಮರಣೀಯವಾದದ್ದು. ಹನುಮಂತ ಭಾರತ ದೇಶದ ಕುಸ್ತಿ ಪಟುಗಳ ಆರಾಧ್ಯ ದೈವವಾಗಿದ್ದಾನೆ ಎಂದರು.

ಮುಖಂಡರಾದ ಸಿದ್ದು ಕೊಣ್ಣೂರ, ರವಿಗೌಡ ಪಾಟೀಲ, ಡಾ.ಎ.ಆರ್.ಬೆಳಗಲಿ, ಬಸನಗೌಡ ಪಾಟೀಲ, ಬಲವಂತಗೌಡ ಪಾಟೀಲ , ಶೇಖರ ಅಂಗಡಿ, ಮುದಕಪ್ಪ ಮಾಳಿ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣಗೌಡ ಪಾಟೀಲ, ಸುನೀಲಗೌಡ ಪಾಟೀಲ,ಚನ್ನಪ್ಪ ಪಟ್ಟಣಶೆಟ್ಟಿ, ಹಣಮಂತ ಬುರುಡ, ಸುನೀಲಗೌಡ ಪಾಟೀಲ, ಸಂದೀಪ್ ಕನಕರಡ್ಡಿ, ಮಹಾಲಿಂಗ ಮಾಳಿ, ನಿಂಗಪ್ಪ ಬಾಳಿಕಾಯಿ , ಶಂಕರಗೌಡ ಪಾಟೀಲ, ಚನ್ನಯ್ಯ ಚಟ್ಟಿಮಠ, ಅರವಿಂದ ಮಾಲಬಸರಿ,ಆನಂದ ಹಟ್ಟಿ, ಬಂದು ಪಕಾಲಿ, ಪ್ರಭು ತಂಬೂರಿ, ಚನ್ನು ದೇಸಾಯಿ, ಭೀಮಶಿ ಸಸಾಲಟ್ಟಿ, ದುಂಡಪ್ಪ ಜಾಧವ, ಚಿದಾನಂದ ಧರ್ಮಟ್ಟಿ, ಮುಸ್ತಾಕ ಚಿಕ್ಕೋಡಿ, ಅಪ್ಪಾಶಿ ಕಾರಜೋಳ, ಶಿವಲಿಂಗ ಘಂಟಿ, ಅಶೋಕಗೌಡ ಪಾಟೀಲ, ಮಾಹಾಲಿಂಗ ಕೌಜಲಗಿ, ಅಬ್ದುಲ್ ಬಾಗವಾನ, ಸಜ್ಜನಸಾಬ ಪೆಂಡಾರಿ,ಮಹಾದೇವ ಮಾರಾಪುರ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net