

ಮುಂಡಗೋಡ: ತಾಲೂಕಿನ ನಂದಿಗಟ್ಟ, ಇಂದೂರ, ಚವಡಳ್ಳಿ, ಕಾತೂರ ಹಾಗೂ ಎಲ್ಎಸ್ಎಂಪಿ ಸೋಸೈಟಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿರುವುದು ಸಂತದ ಸಂಗತಿ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು.
ಬುಧವಾರ ನಡೆದ ಮೂರು ಸಹಕಾರಿ ಸಂಘಗಳಲ್ಲಿ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ರೈತ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ರೈತ ಮತದಾರರ ಸೇವೆ ಮಾಡಲು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ಕಾರ್ಯಕರ್ತರು ಹಾಗೂ ಮುಖಂಡರ ಶ್ರಮದಿಂದ ರೈತ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ರೈತ ಮತದಾರರ ಸೇವೆ ಸಲ್ಲಿಸಲು ನಮ್ಮ ಕಾರ್ಯಕರ್ತರು ಸದಾ ಸಿದ್ಧರಿದ್ದಾರೆ ಎಂದರು.
ತಾಲೂಕಿನ ಇಂದೂರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಯಮನಪ್ಪ ಮಾರಿಂಬಿಡ, ಉಪಾಧ್ಯಕ್ಷನಾಗಿ ಸಲಿಂ ಮುಂಡಗೋಡ,ಚವಡಳ್ಳಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಸವರಾಜ ಉಗ್ನಿಕೇರಿ,ಉಪಾಧ್ಯಕ್ಷರಾಗಿ ನಿರ್ಮಲ ಮಡ್ಲಿ, ಎಲ್ಎಸ್ಎಂಪಿ ಸೋಸೈಟಿಯ ಅಧ್ಯಕ್ಷರಾಗಿ ಮಂಜುನಾಥ ವೆರ್ಣೆಕರ,ಉಪಾಧ್ಯಕ್ಷರಾಗಿ ಸೋಮ್ಲಪ್ಪ ಲಮಾಣಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಮಳಗಿ ಸೇವಾ ಸಹಕಾರಿ ಸಂಘದಲ್ಲಿ ಬಿಜೆಪಿ ಬೆಂಬಲಿತರ ಪಾಲಾಗಿದ್ದು ಅಧ್ಯಕ್ಷರಾಗಿ ಮಹಾಲಿಂಗ ನೆಗಳೂರ, ಉಪಾಧ್ಯಕ್ಷ ಧರ್ಮಣ್ಣ ಭೋವಿ ಆಯ್ಕೆಯಾಗಿದ್ದಾರೆ.