

ಕುಮಟಾ: ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ದಿನಕರನ ಉದಯವಾಗಿದೆ. ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮೂರನೇ ಬಾರಿಗೆ ಶಾಸಕರಾಗಿದ್ದಾರೆ. ಈ ಅವಧಿಯಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಪರಪೀಡನೆಯಿಲ್ಲದ ಪ್ರವೃತ್ತಿ ಶೆಟ್ಟರ ಕೈ ಹಿಡಿದಿದೆ. ಕಾಂಗ್ರೆಸ್‌ನ ಅಸಮಾಧಾನ ವರವಾಗಿದೆ.
1994ರಿಂದಲೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತ ಬಂದಿರುವ ಅವರು 2008ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿದ್ದರು. ನಂತರ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಅವರು 32,750 ಮತಗಳ ಅಂತರದಿಂದ ಗೆದ್ದು, ದಾಖಲೆ ಮಾಡಿದ್ದರು. ಈ ಬಾರಿ ತಮ್ಮ ಕೊನೆಯ ಚುನಾವಣೆ ಎಂಬ ಅಸ ಬಳಸಿ ಜನರ ಮನ ಗೆದ್ದಿದ್ದಾರೆ.
ಎಡವಿದ ಕಾಂಗ್ರೆಸ್: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದು, ದಿನಕರ ಶೆಟ್ಟಿ ಅವರಿಗೆ ಲಾಭವಾಗಿದೆ. ಇಲ್ಲಿನ ಜಾತಿ ಲೆಕ್ಕಾಚಾರ, ಕಾರ್ಯಕರ್ತರ ದುಡಿಮೆಯನ್ನು ಕಡೆಗಣಿಸಿ ಹೊರಗಿನ ಅಭ್ಯರ್ಥಿಯನ್ನು ತಂದ ಕಾಂಗ್ರೆಸ್ ತನ್ನ ಕರ್ಮಕ್ಕೆ ಬೆಲೆ ತೆರುವಂತಾಗಿದೆ.
ಮುಖ್ಯವಾಗಿ ಶಾರದಾ ಶೆಟ್ಟಿ ಹಾಗೂ ಶಿವಾನಂದ ಹೆಗಡೆ ಮುಂತಾದ ಮುಖಂಡರನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಅದು ಬಿಜೆಪಿಗೆ ಲಾಭ ತಂದುಕೊಟ್ಟಿದೆ. ಕಾಂಗ್ರೆಸ್ ಟಿಕೆಟ್ ವಾರ್‌ನ ಬಳಿಕ ಶಾರದಾ ಶೆಟ್ಟಿ ಸೈಲೆಂಟಾದರೆ, ಶಿವಾನಂದ ಹೆಗಡೆ ಬಿಜೆಪಿ ಸೇರಿ ದಿನಕರರಿಗೆ ಬಲ ತಂದುಕೊಟ್ಟರು.
ತೀವ್ರ ಪೈಪೋಟಿ ನೀಡಿದ ಸೂರಜ್: ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದರು. ಗೆಲುವಿನ ತೀರ ಸನಿಹ ಬಂದು ಸೋಲು ಕಂಡಿದ್ದಾರೆ.
ಮೂಲತಃ ಹಿಂದು ಕಾರ್ಯಕರ್ತರಾಗಿರುವ ಸೂರಜ, ಸಂಸದ ಅನಂತಕುಮಾರ ಹೆಗಡೆ ಆಪ್ತರಾಗಿದ್ದರು. ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಬಳಿಕ ನಡೆದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿ ಜೈಲು ಸೇರಿದ್ದರು. ಆದರೆ, ಬಿಜೆಪಿ ಟಿಕೆಟ್‌ನಿಂದ ವಂಚಿತರಾದ ಅವರು 2018ರಲ್ಲೇ ಪಕ್ಷೇತರವಾಗಿ ಸ್ಪರ್ಧಿಸಿ 20,274 ಮತ ಪಡೆದು, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು.
ನಂತರ ಜೆಡಿಎಸ್ ಸೇರಿ, ಕಾಂಗ್ರೆಸ್ ಕಡೆಗೂ ಇದ್ದ ನಾಮಧಾರಿ ಮತಗಳನ್ನೂ ಕ್ರೋಡೀಕರಿಸಿ ಸಂಘಟನೆ ಮಾಡಿದ್ದು, ದಿನಕರ ಶೆಟ್ಟಿ ಅವರಿಗೆ ಸವಾಲು ನೀಡಿದ್ದರು. ಮಾತ್ರವಲ್ಲ, ದಿನಕರ ಶೆಟ್ಟಿ ಅವರ ಕಡೆಗಿದ್ದ ಹಾಲಕ್ಕಿ ಮತ ಬ್ಯಾಂಕ್‌ಗೂ ಕೈ ಹಾಕಿದ್ದರು. ಬಿಜೆಪಿಯ ಹವ್ಯಕ ಮತಗಳನ್ನೂ ಸೆಳೆದಿದ್ದರು.
ಕುಮಟಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಕಮಲ ಅರಳಿದೆ. 1983 ಹಾಗೂ 1994ರಲ್ಲಿ ಡಾ. ಎಂ.ಪಿ. ಕರ್ಕಿ ಅವರು ಕುಮಟಾ ಕ್ಷೇತ್ರದಿಂದ ಬಿಜೆಪಿಯ ಶಾಸಕರಾಗಿದ್ದರು. ನಂತರ 2018ರಲ್ಲಿ ದಿನಕರ ಶೆಟ್ಟಿ ಅವರು 59,392 ಮತಗಳನ್ನು ಪಡೆದು ಗೆದ್ದಿದ್ದರು. ಈ ಬಾರಿ ದಿನಕರ ಅವರು ವೈಯಕ್ತಿಕ ವರ್ಚಸ್ಸಿನ ಜತೆಗೆ ಬಿಜೆಪಿಯ ಸಂಘಟನೆ, ಮೋದಿ ಅಲೆಯೂ ಕೆಲಸ ಮಾಡಿದೆ.