

ಹುಣಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಮೈತ್ರಿ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿದರು.
ನಗರದ ಸಂವಿಧಾನ ವೃತ್ತದಲ್ಲಿ ಬುಧವಾರ ಜಮಾವಣೆಗೊಂಡ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಯದುವೀರ್ ಒಡೆಯರ್ ಮತ್ತು ಮೋದಿ ಅವರಿಗೆ ಜಯಘೋಷ ಮೊಳಗಿಸಿದರು. ಬಳಿಕ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ಮಾಜಿ ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಜಿ.ಡಿ.ಹರೀಶ್‌ಗೌಡ ಮತ್ತು ಜಿ.ಟಿ.ದೇವೇಗೌಡ ಮತ್ತು ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಹೋರಾಟ ನಡಸಿದ ಫಲವಾಗಿ ಯದುವೀರ್ ವಿಜಯ ಸಾಧಿಸಿದ್ದಾರೆ ಎಂದರು.
ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷ ಕಾಂತರಾಜ್, ನಗರಾಧ್ಯಕ್ಷ ನಾರಾಯಣ, ರಮೇಶ್ ಕುಮಾರ್, ಜೆಡಿಎಸ್ ಮುಖಂಡ ಕೆಂಪೇಗೌಡರು ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ದೇವರಹಳ್ಳಿ ಸೋಮಶೇಖರ್, ಪ್ರಸನ್ನ ಬಿಳಿಕೆರೆ, ಅಶೋಕ್, ಮಧು, ಉಮೇಶ್, ರಮೇಶ್, ಕಮಲಮ್ಮ, ವೆಂಕಟಮ್ಮ ಸೇರಿದಂತೆ ಎರಡೂ ಪಕ್ಷಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.