ಹೊಸಹೊಳಲು ಸೊಸೈಟಿಗೆ 10 ಲಕ್ಷ ರೂ ವಿನಾಯಿತಿ: ಆದಾಯ ತೆರಿಗೆ ಇಲಾಖೆ ವಿರುದ್ಧ ಗೆಲುವು

Victory against Income Tax Department Senior Cooperator Channappa Press Conference Mandya
Published on

ಮಂಡ್ಯ: ಎಂಡಿಸಿಸಿ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿ ಆದಾಯ ತೆರಿಗೆ ಇಲಾಖೆ ಕೆ.ಆರ್.ಪೇಟೆ ತಾಲೂಕು ಹೊಸಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಿಧಿಸಿದ್ದ ತೆರಿಗೆ ವಿಧಿಸಿತು. ಇದರ ವಿರುದ್ಧ ಆದಾಯ ತೆರಿಗೆ ನ್ಯಾಯಾಲಯ(ಕಮೀಷನರ್ ಆಫ್ ಇನ್‌ಕಮ್ ಟ್ಯಾಕ್ಸ್-ಅಪೀಲ್ಸ್)ದಲ್ಲಿ ದಾವೆ ಹೂಡಿ ತೆರಿಗೆ ವಿನಾಯಿತಿ ಕೊಡಿಸಲಾಗಿದೆ ಎಂದು ಹಿರಿಯ ಸಹಕಾರಿ ಕೌಡ್ಲೆ ಚನ್ನಪ್ಪ ಹೇಳಿದರು.
ಮಂಡ್ಯದ ಚಾರ್ಟಡ್ ಅಕೌಂಟೆಂಟ್ ಎಚ್.ಶಂಕರೇಗೌಡ ಅವರು ಆದಾಯ ತೆರಿಗೆ ನ್ಯಾಯಾಲಯದಲ್ಲಿ ದಾವೆ ಹೂಡಿ ಹೊಸಹೊಳಲು ಗ್ರಾಮದ ಸೊಸೈಟಿಗೆ ತೆರಿಗೆ ವಿನಾಯಿತಿ ಕೊಡಿಸಿದ್ದಾರೆ. ಇದು ಜಿಲ್ಲೆಯಲ್ಲಿ ಮೊದಲ ಪ್ರಕರಣವಾಗಿದ್ದು, ಸಹಕಾರ ಕ್ಷೇತ್ರ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಆದಾಯ ತೆರಿಗೆ ನ್ಯಾಯಾಲಯದ ಈ ಆದೇಶವು ಇತರ ಸಹಕಾರ ಸಂಘ ಸಂಸ್ಥೆಗಳಿಗೆ ನೆರವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊಸಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಎಂಡಿಸಿಸಿ ಬ್ಯಾಂಕ್‌ನಲ್ಲಿ ಇಟ್ಟಿದ್ದ ಠೇವಣಿಗೆ 25,08,402 ರೂ ಬಡ್ಡಿ ಬಂದಿತ್ತು. ಆದರೆ, ಈ ಮೊತ್ತಕ್ಕೆ ಮಂಡ್ಯದ ಆದಾಯದ ತೆರಿಗೆ ಇಲಾಖೆ 10,57,454 ರೂ ತೆರಿಗೆ ವಿಧಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಚಾರ್ಟಡ್ ಅಕೌಂಟೆಂಟ್ ಎಚ್.ಶಂಕರೇಗೌಡ ಅವರು ಆದಾಯ ತೆರಿಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ಸಮರ್ಥ ವಾದ ಮಂಡಿಸಿ ಕಾನೂನು ಹೋರಾಟ ನಡೆಸಿದ್ದರು. ಇದರೊಂದಿಗೆ ಆದಾಯ ಇಲಾಖೆ ವಿಧಿಸಿದ್ದ ತೆರಿಗೆಯನ್ನು ನ್ಯಾಯಾಲಯವು ರದ್ದುಗೊಳಿಸಿ ತೆರಿಗೆ ವಿನಾಯಿತಿ ನೀಡಿದೆ ಎಂದರು.
ಜಿಲ್ಲಾ ಸಹಕಾರಿಗಳ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಚ್.ಸಿದ್ದಯ್ಯ, ಚಾರ್ಟಡ್ ಅಕೌಂಟೆಂಟ್ ಎಚ್.ಶಂಕರೇಗೌಡ ಇದ್ದರು.

ಎಂಡಿಸಿಸಿ ಬ್ಯಾಂಕ್ ಆರ್‌ಬಿಐ ನಿಂದ ಲೈಸೆನ್ಸ್ ಪಡೆದು ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿರುವುದರಿಂದ ಸಹಕಾರ ಸಂಘದ ವ್ಯಾಪ್ತಿಗೆ ಬರುತ್ತಿಲ್ಲ. ಈ ಅಂಶವನ್ನಿಟ್ಟುಕೊಂಡು ಹಾಗೂ ಬೇರೆ ರಾಜ್ಯಗಳಲ್ಲಿನ ಪ್ರಕರಣಗಳನ್ನು ಉಲ್ಲೇಖಿಸಿ ವಾದ ಮಂಡಿಸಲಾಗಿತ್ತು. ಸೊಸೈಟಿ ರೈತರಿಗೆ ರಿಯಾಯಿತಿ ದರಲ್ಲಿ ರಸಗೊಬ್ಬರ ಮಾರಾಟ ಮಾಡಿ ಅದರಿಂದ ಬಂದ ಲಾಭಾಂಶ ಹಾಗೂ ಸಾಲದ ಮೇಲಿನ ಬಡ್ಡಿಯಿಂದ ಬ್ಯಾಂಕ್‌ಗಳನ್ನು ನಡೆಸಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಪಿ ಪ್ರಕಾರ ಸಾಲದ ಮೇಲೆ ಸಂಗ್ರಹಿಸುವ ಬಡ್ಡಿ ಹಾಗೂ 80ಪಿ(2)(4) ಪ್ರಕಾರ ಒಂದು ಸಹಕಾರ ಸಂಘವು ಮತ್ತೊಂದು ಸಹಕಾರ ಸಂಘದಲ್ಲಿ ಹಣವನ್ನು ಠೇವಣಿ ಇಟ್ಟು ಪಡೆಯುವ ಬಡ್ಡಿ ಮೇಲಿನ ತೆರಿಗೆಗೂ ವಿನಾಯಿತಿ ಇದೆ. ಇದರಿಂದ ಸಂಘಕ್ಕೆ 10 ಲಕ್ಷಕ್ಕೂ ಹೆಚ್ಚು ಹಣ ಉಳಿತಾಯವಾಗಿದೆ.ಎಚ್.ಶಂಕರೇಗೌಡಚಾರ್ಟಡ್ ಅಕೌಂಟೆಂಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net