ಸಂತ್ರಸ್ಥರಿಂದ ಸಿಎಂಗೆ ಘೇರಾವ್

New PM New
Published on

ಹುಬ್ಬಳ್ಳಿ : ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ಥರ ಭೂಮಿಗೆ ಬೆಲೆ ನಿಗದಿ ಪಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಆದ್ದರಿಂದ ಸೆ.6 ರಂದು ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಆಲಮಟ್ಟಿ ಜಲಾಶಯಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೇರಾವು ಹಾಕಿ, ಪ್ರತಿಭಟನೆ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತಸ್ಥರ ಭೂಮಿಗೆ ಬೆಲೆ ನಿಗದಿ ಪಡಿಸಲು ಸೆ. 3 ರಂದು ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರು ವಿಧಾನಸೌಧದಲ್ಲಿ ವಿಶೇಷ ಸಭೆ ಕರೆದಿದ್ದರು. ಆದರೆ, ಸಭೆಯಲ್ಲಿ ಯಾವುದೇ ಸೂಕ್ತ ತೀಮಾನ ಆಗಲಿಲ್ಲ. ಸೆ.4 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಬೆಲೆಯನ್ನು ನಿಗದಿ ಪಡಿಸುವ ಭರವಸೆ ನೀಡಿದ್ದರು. ಆದರೆ, ಯಾವುದೇ ಚರ್ಚೆ ಮತ್ತು ತೀರ್ಮಾನ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೇಕೆದಾಟು ಮಾತ್ರ ನೀರಾವರಿ ಯೋಜನೆಯೆಂದು ಸರ್ಕಾರ ಭಾವಿಸಿದಂತಿದೆ. ಕೃಷ್ಣಾ ಮೇಲ್ದಂಡೆ ಮತ್ತು ಕಳಸಾ-ಬಂಡೂರಿ ಯೋಜನೆಗಳೂ ನೀರಾವರಿ ಯೋಜನೆಗಳೇ ಎಂಬುದನ್ನು ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕು. ಸಂತ್ರಸ್ಥರಿಗೆ ನ್ಯಾಯ ಒದಗಿಸದೇ ಕೃಷ್ಣೆಗೆ ಬಾಗೀನ ಅರ್ಪಿಸಿದರೆ ಅದಕ್ಕೆ ಅರ್ಥವಿದೆಯೇ ಎಂದು ಪ್ರಶ್ನಿಸಿದರು.

ಕರ್ನಾಟಕ ರೖತ ಸೇನೆಯ ಅಧ್ಯಕ್ಷ ಶಂಕರಣ್ಣ ಅಂಬಲಿ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳೊಂದಿಗೆ ಅಪ್ಪರ್ ಕೃಷ್ಣಾ ಯೋಜನೆಗೆ 40 ಸಾವಿರ ಕೋಟಿ ರೂ. ಕಾಯ್ದಿರಿಸುವ ಮೂಲಕ ಇದನ್ನು 6ನೇ ಗ್ಯಾರಂಟಿ ಯೋಜನೆಯನ್ನಾಗಿ ಪರಿಗಣಿಸಲಾಗುವುದೆಂದು ಸರ್ಕಾರ ಭರವಸೆ ನೀಡಿತ್ತು. ಈಗಾಗಲೇ ರೈತರ ವಿಶ್ವಾಸ ಕಳೆದುಕೊಂಡಿರುವ ಸರ್ಕಾರ, ಪ್ರತ್ಯೇಕ ರಾಜ್ಯ ಹೋರಾಟ ಪ್ರಾರಂಭಗೊಳ್ಳುವ ಮೊದಲೇ ಸಂತ್ರಸ್ಥರ ಭೂಮಿಗೆ ಬೆಲೆ ನಿಗದಿಪಡಿಸಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸೇನೆಯ ರಾಜ್ಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ರೈತ ಮುಖಂಡರಾದ ಪ್ರವೀಣ ಯರಗಟ್ಟಿ, ರಾಜು ಅಂಗಡಿ, ಸದಾಶಿವ ಮಾತನ್ನವರ ಹಾಗೂ ಪ್ರಕಾಶ ಶಿರಹಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net