

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಸರಿ ನಂದನ ಕ್ರಿಯೇಷನ್ಸ್ನವರ ವಿಕ್ಕಿ ಸಿನಿಮಾ ರಾಜ್ಯಾದ್ಯಂತ ಮೇ 9ರಂದು ಬಿಡುಗಡೆ ಆಗಲಿದೆ ಎಂದು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭರತ ತಾಳಿಕೋಟಿ ನಾಯಕನಾಗಿರುವ ಈ ಚಿತ್ರದಲ್ಲಿ ನಟಿಸಿದ ಬಹುತೇಕ ಉತ್ತರ ಕರ್ನಾಟಕ ಭಾಗದ ಕಲಾವಿದರೇ ಆಗಿದ್ದಾರೆ. ನಾಯಕಿಯಾಗಿ ಶ್ರೀನಿಧಿಗೌಡ ಅಭಿನಯಿಸಿದ್ದು, ದೀಪಕ್ ಎಸ್. ಅವಂದಕರ್ ನಿರ್ದೇಶನ, ಅರವ್ ರಷಿಕ್ ಸಂಗೀತ ಸಂಯೋಜಿಸಿದ್ದಾರೆ ಎಂದರು.
15 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಭರತ ತಾಳಿಕೋಟಿ, ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ನಾಯಕ ನಟನಾಗಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಬೆಂಗಳೂರು, ಚಿಕ್ಕಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಾಜ್ಯದ ಜನರು ನನಗೆ ಆಶೀರ್ವದಿಸಿದಂತೆ ಮಗನಿಗೆ ಪ್ರೋತ್ಸಾಹ ನೀಡುತ್ತಾರೆ ಎಂಬ ಭರವಸೆ ಇದೆ ಎಂದರು.
ನಟ ಭರತ ತಾಳಿಕೋಟಿ ಮಾತನಾಡಿ, ಚಿತ್ರದಲ್ಲಿ ಹಾಡು ಹಾಗೂ ಹೊಡೆದಾಟ ಇಲ್ಲದಿರುವುದು ವಿಶೇಷ. ಚಿತ್ರದಲ್ಲಿ ರಾಜು ತಾಳಿಕೋಟಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದ ಹಾಸ್ಯದ ಜತೆಗೆ ಯುವ ಜನತೆಗೆ ಒಳ್ಳೆ ಸಂದೇಶ ನೀಡುವ ಚಿತ್ರವಾಗಿದೆ. ಒಟ್ಟು 58 ಚಿತ್ರಮಂದಿರಗಳಲ್ಲಿ ಚಲನಚಿತ್ರ ಬಿಡುಗಡೆಯಾಗಲಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ಮೊದಲು ಬಿಡುಗಡೆಯಾಗಲಿದೆ ಎಂದರು.