‘ವಿಕ್ಕಿ’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆ

‘Vicky’ film releases in state today
ಜಮಖಂಡಿ ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಕ್ಕಿ ಚಲನಚಿತ್ರದ ನಿರ್ದೇಶಕ ದೀಪಕ ಅವಂಕರ ಮಾತನಾಡಿದರು. ನಿರ್ಮಾಪಕ ಕೆ.ಆರ್. ಸುರೇಶ, ನಾಯಕ ನಟ ಭರತ ತಾಳಿಕೋಟಿ ಇದ್ದಾರೆ.
Published on

ಜಮಖಂಡಿ: ಖ್ಯಾತ ಹಾಸ್ಯ ನಟ ಡಾ. ರಾಜು ತಾಳಿಕೋಟಿ ಅವರ ಪುತ್ರ ಭರತ ತಾಳಿಕೋಟಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ ವಿಕ್ಕಿ (ಡೊನರ್ ಅಲ್ಲ) ಚಲನಚಿತ್ರ ಮೇ 8 ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ದೀಪಕ ಅವಂಕರ ತಿಳಿಸಿದರು.

ನಗರದ ರಮಾ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ಉತ್ತರ ಕರ್ನಾಟಕ ಭಾಗದ ಕಲಾವಿದರನ್ನು ಒಳಗೊಂಡಿರುವ ಹಾಸ್ಯ ಪ್ರಧಾನ ಚಿತ್ರ ಇದಾಗಿದ್ದು, ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡುತ್ತದೆ. ನವನೀತ ಲಕ್ಷ್ಮೀ ಹಾಗೂ ಕೆ.ಆರ್. ಸುರೇಶ ಚಿತ್ರದ ನಿರ್ಮಾಪಕರಾಗಿದ್ದು, ಶ್ರೀನಿಧಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ವೀಕ್ಷಿಸುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಿರ್ಮಾಪಕ ಕೆ.ಆರ್. ಸುರೇಶ್ ಮಾತನಾಡಿ, ಜಮಖಂಡಿಯ ಶರಣ ಕಲ್ಲೂರು ಎಂಬುವವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಕಲಾವಿದರೇ ಹೆಚ್ಚಾಗಿರುವುದರಿಂದ ಇಲ್ಲಿಂದಲೇ ಬಿಡುಗಡೆ ಮಾಡಲು ಯೋಚಿಸಿದ್ದೇವೆ. ಮಧ್ಯಮ ವರ್ಗದ ಯುವಕರು ಗುರಿ ಸಾಧಿಸಲು ಪಡುವಂಥ ಕಷ್ಟಗಳು ಹಾಗೂ ಗುರಿ ಸಾಧಿಸುವುದು ಹೇಗೆ? ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ರಾಜು ತಾಳಿಕೋಟಿ ಅವರು ಸಹ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಮನರಂಜನೆ ನೀಡಿದ್ದಾರೆ. 2 ಗಂಟೆ 17 ನಿಮಿಷದ ಚಿತ್ರ ಇದಾಗಿದ್ದು, ಬೆಂಗಳೂರು, ಚಿಕ್ಕಮಗಳೂರು ಸುತ್ತ ಚಿತ್ರೀಕರಣ ನಡೆದಿದೆ ಎಂದು ಮಾಹಿತಿ ನೀಡಿದರು.

ನವ ನಾಯಕ ನಟ ಭರತ ತಾಳಿಕೋಟಿ ಮಾತನಾಡಿ, ನನ್ನ ಮೊದಲ ಪ್ರಯತ್ನ ಇದಾಗಿದ್ದು, ನನ್ನನ್ನು ನಂಬಿ ಚಿತ್ರಕ್ಕೆ ಹಣ ತೊಡಗಿಸಿದ ನಿರ್ಮಾಪಕರ ಕೈಬಿಡಬೇಡಿ, ಚಿತ್ರಮಂದಿರಗಳಲ್ಲಿ ವೀಕ್ಷಿಸಿ ನಮ್ಮನ್ನು ಆಶೀರ್ವದಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net