ನಾಟಕಗಳು ವಿಜ್ಞಾನ ಪಸರಿಸುವ ಚಳವಳಿಯಾಗಲಿ: ಡಯಟ್ ಪ್ರಾಂಶುಪಾಲ ಎಂ.ಶಿವಮಾದಪ್ಪ ಆಶಯ

Diat
Published on

ಮಂಡ್ಯ: ಮನುಷ್ಯನ ಬದುಕಿನಲ್ಲಿ ವಿಜ್ಞಾನ ಮುಖ್ಯ ಪಾತ್ರ ವಹಿಸುತ್ತದೆ. ನಾಟಕದ ಮೂಲಕ ವಿದ್ಯಾರ್ಥಿಗಳಲ್ಲಿ ಪಸರಿಸಿದಾಗ ವೈಜ್ಞಾನಿಕ ಮನೋಭಾವದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಡಯಟ್ ಪ್ರಾಂಶುಪಾಲ ಎಂ.ಶಿವಮಾದಪ್ಪ ಹೇಳಿದರು.
ನಗರದ ಡಯಟ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಸಂವಹನದಲ್ಲಿ ನಾಟಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶ ನಮ್ಮದಾಗಿದೆ. ವಿಜ್ಞಾನ ನಾಟಕಗಳು ವಿಜ್ಞಾನವನ್ನು ಪಸರಿಸುವ ಚಳವಳಿಯಾಗಬೇಕು. ನಾಟಕಗಳಲ್ಲಿ ಹಿಂದೆ ಮನರಂಜನೆ ಇರಲಿಲ್ಲ. ಪ್ರಾಚೀನ ಕಾಲದಿಂದಲೂ ನಾಟಕಗಳನ್ನು ಅಭ್ಯಾಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮನರಂಜನೆಗೆ ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಭಾವನೆ ಬೆಳೆಸುವುದು ನಾಟಕದ ಉದ್ದೇಶ ಎಂದು ತಿಳಿಸಿದರು.
ಒಂದು ತಂಡದ ಮೂಲಕ ನಾಟಕದಲ್ಲಿ ಯಾವ ರೀತಿ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ನಿರ್ಧರಿಸುತ್ತಾರೆ. ಜಿಲ್ಲಾ ಹಂತದಲ್ಲಿ ವಿಜೇತರಾದವರು 5 ಜಿಲ್ಲೆಗೆ ಸೇರುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ನಂತರ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಅವಕಾಶಗಳಿವೆ. ಎಲ್ಲ ಚೌಕಟ್ಟಿನೊಳಗೆ ನಿಯಮಗಳನ್ನು ಅಳವಡಿಸಿಕೊಂಡು ಉತ್ತಮ ಪ್ರದರ್ಶನ ನೀಡಿದವರು ಜಿಲ್ಲೆಯಿಂದ ಆಯ್ಕೆಯಾಗುವ ಮೂಲಕ ರಾಷ್ಟ್ರಮಟ್ಟಕ್ಕೆ ಹೋಗುವ ಅವಕಾಶ ಸಿಗಲಿ ಎಂದರು.
ನೋಡಲ್ ಅಧಿಕಾರಿ ಡಾ.ಬಿ.ವಿ.ನಂದೀಶ್, ವಿಷಯ ಪರಿವೀಕ್ಷಕ ನಂಜರಾಜು, ಪ್ರಾಂಶುಪಾಲ ನಾಗರಾಜು, ಉಪನ್ಯಾಸಕರಾದ ಪುಟ್ಟಸ್ವಾಮಿ, ಎಸ್.ಸಿದ್ದರಾಜು, ಪ್ರತಿಭಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net