ಮೀಸಲಾತಿಯಿಂದ ಬಹಳಷ್ಟು ಜನರಿಗೆ ಅನುಕೂಲ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯ

Vichara Gosti
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ ಮೂಲ ಹಕ್ಕುಗಳನ್ನಾಗಿ ಸರ್ಕಾರಗಳು ರಚಿಸಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದಲ್ಲಿ ಅಖಿಲ ಭಾರತ ವಕೀಲ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಆಯೋಜಸಿದ್ದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ವಿಚಾರಗೋಷ್ಠಿ, ಮೀಸಲಾತಿ ಭ್ರಮೆ ಮತ್ತು ವಾಸ್ತವ ಪುಸ್ತಕ ಬಿಡುಗಡೆ ಕಾರ್ಯಕಮದಲ್ಲಿ ಮಾತನಾಡಿದರು.
ಸಾಮಾಜಿಕ ನ್ಯಾಯದಡಿ ಮೀಸಲಾತಿ ಬರುತ್ತದೆ. ಭಾರತದಲ್ಲಿ ಮೀಸಲಾತಿಯಿಂದ ಸಾಕಷ್ಟು ಜನರಿಗೆ ಅನುಕೂಲ, ಉಪಯುಕ್ತವಾಗಿದೆ. ಸಂವಿಧಾನ ಜಾರಿಯಾಗಿ 75 ವರ್ಷಗಳು ಸಂದುತ್ತಿವೆ. ಇನ್ನೂ ಮೀಸಲಾತಿಯ ಸೌಲಭ್ಯಗಳಿಂದ ವಂಚಿತ ಸಮುದಾಯಗಳು ಸಾಕಷ್ಟಿವೆ. ಇಂದಿನ ದಿನಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಮಾತಿ ಹೆಚ್ಚಳಮಾಡಿ ಎಂದು ಕೂಗು ಎದ್ದಿದೆ. ಶೋಷಿತ ಸಮುದಾಯಗಳನ್ನು ಇಂತಹದ್ದೇ ಮೀಸಲಾತಿ ಪಟ್ಟಿಗೆ ಸೇರಿಸಿ ಎಂದು ಸ್ವಾಮೀಜಿಗಳಿಂದ ಹಿಡಿದು ಪ್ರಜ್ಞಾವಂತ ರಾಜಕೀಯ ನಾಯಕರವರೆಗೂ ಹೋರಾಟ ನಡೆಯುತ್ತಿವೆ. ಇನ್ನೂ ಎಷ್ಟು ವರ್ಷ ಮೀಸಲಾತಿ ಮುಂದುವರಿಸಬೇಕು ಎನ್ನುವ ಪ್ರಶ್ನೆಗಳು ಎದ್ದಿವೆ ಎಂದು ಉಚ್ಚರಿಸಿದರು.
ಇಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ ಕ್ಷೇತ್ರಗಳು ಮೂಲ ಹಕ್ಕುಗಳಾದರೆ ಮೀಸಲಾತಿ ಹಂತ ಹಂತವಾಗಿ ಕಡಿಮೆಯಾಗುತ್ತದೆ. ಮೀಸಲಾತಿ ವಂಚಿತರು ಸದೃಢವಾಗುತ್ತಾರೆ. ಈ ನಿಟ್ಟಿನಲ್ಲಿ ಸ್ವಾಮೀಜಿಗಳು ಹೋರಾಟ ಮಾಡಬೇಕಿದೆ. ಪ್ರಜ್ಞಾವಂತರ ಚಿಂತನ ಮಂಥನ ಮಾಡಬೇಕಿದೆ. ಸರ್ಕಾರ ಮುಂದಾಗಬೇಕಿದೆ ಎಂದು ಸಲಹೆ ನೀಡಿದ ಅವರು, ಜಗತ್ತಿನ ಎಲ್ಲ ದೇಶಗಳಲ್ಲೂ ಒಂದಲ್ಲ ಒಂದು ರೀತಿಯ ಅಸಮಾನತೆ ಇದೆ. ಬೇಧ-ಭಾವ, ತಾರತಮ್ಯ ಕಾಣುತ್ತೇವೆ. ವರ್ಣ-ಧರ್ಮ, ಜಾತಿ-ಲಿಂಗ, ಭಾಷಾ, ಸಾಂಸ್ಕೃತಿಕ ವರ್ಗ ಬೇಧ ಈರಿತಿಯ ಅಸಮಾನತೆಗಳನ್ನು ನೋಡುತ್ತಿದ್ದೇವೆ. ವಿವಿಧ ದೇಶಗಳಲ್ಲಿ ಇಂತಹ ಅನಿಷ್ಠತೆ ಇದೆ ಎಂದರು.
ಒಕ್ಕೂಟ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್, ಹಿರಿಯ ವಕೀಲ ಎಚ್.ಬಸವಯ್ಯ, ಜಿಲ್ಲಾ ಕಾರ್ಯದರ್ಶಿ ಎಂ.ಚಂದನ್‌ಕುಮಾರ್, ರಾಜ್ಯ ಕಾರ್ಯದರ್ಶಿ ಶ್ರೀನಿವಾಸಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಕಾರ್ಯದರ್ಶಿ ಸಿದ್ದರಾಜು, ಟಿ.ಡಿ.ಮಹದೇವು, ಆರ್.ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net