

ಮಂಡ್ಯ: ಪ್ರಸ್ತುತ ರಾಜಕೀಯಕ್ಕೆ ಬರುವವರು ಆದಾಯಕ್ಕೆ ಬರುತ್ತಿದ್ದಾರೆಯೇ ಹೊರತು ಸೇವೆಗೆ ಅಲ್ಲ. ಈ ಮನೋಭಾವನೆಯನ್ನು ಬದಲಾಯಿಸುವ ಅಗತ್ಯತೆ ಇದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಸೇನೆ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ರಾಜಕೀಯವನ್ನು ಒಂದು ವೃತ್ತಿಯಾಗಿ ಪರಿಗಣಿಸಲಾಗಿದೆಯೇ ಹೊರತು ಸೇವಾಮನೋಭಾವನೆ ಕಣ್ಮರೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನನ್ನ ಮತವನ್ನು ಸಮಾಜಸೇವೆ ಮಾಡುವವರಿಗೆ ಮಾತ್ರವೇ ಹೊರತು ಸ್ವಹಿತದ ರಾಜಕಾರಣ ಮಾಡುವವರಿಗಲ್ಲ. ಅಂತೆಯೇ ಧರ್ಮದ ಆಧಾರದ ನನಗೆ ಲಾಭ ಸಿಗಬಹುದು ಎಂದು ಮತ ಹಾಕುವುದಿಲ್ಲ ಎಂಬ ನಿರ್ಧಾರವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ಇಂದು ರಾಜಕೀಯ ಎಂದರೆ ಹಿತದ ಸುದ್ದಿಗಿಂತ ವಿಮುಖವಾದದ್ದು. ಹಿಂದೆಲ್ಲ ಹೆಚ್ಚು ಓದಿ ದೇಶ ಸೇವೆ ಮಾಡಬೇಕು. ಇಂಜಿನಿಯರ್, ವೈದ್ಯರಾಗಬೇಕು ಎನ್ನುವ ಕಾಲ ಇತ್ತು. ಆದರೆ ಇಂದು ರಾಜಕೀಯಕ್ಕೆ ಬರಬೇಕು ಎಂಬ ವಿಚಾರ ಬಿಟ್ಟು ಬೇರೆ ಯೋಚನೆ ಮಾಡುತ್ತಿಲ್ಲ. ಅದರಂತೆ ರಾಜಕೀಯಕ್ಕೆ ಬರುವವರೂ ಸಹ ಹೆಚ್ಚಾಗಿದ್ದಾರೆ ಎಂದರು.
ಹಿಂದೆಲ್ಲ ಜನರಿಂದ ಆಯ್ಕೆಯಾಗಿ ಹೋಗುವ ಪ್ರತಿನಿಧಿಗೆ ಸದನದಲ್ಲಿ ಯಾವುದೇ ಸಂಭಾವನೆ ಇರಲಿಲ್ಲ. ತಮ್ಮ ವೈಯಕ್ತಿಕ ಅನುಭವದಿಂದ ಜನರಿಂದ ವಂತಿಕೆ ಸ್ವೀಕರಿಸುತ್ತಿದ್ದರು. ಕ್ಷೇತ್ರದ ವಂತಿಕೆಯಿಂದ ಊಟ, ವಾಸ್ತವ್ಯದ ವ್ಯವಸ್ಥೆ ಕೂಡ ನಡೆಯುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ. ಮುಗಿದ ಬಳಿಕ ಅಭಿವೃದ್ಧಿ ಬಗ್ಗೆಯೇ ಚಿಂತನೆ ನಡೆಯುತಿತ್ತು. ಆದರೀಗ ವರ್ಷದ 365 ದಿನವೂ ರಾಜಕೀಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಆಡಳಿತ ಪಕ್ಷದವರು ಮಾಡುವ ಕರಾರನ್ನು ವಿಪಕ್ಷದವರು ವಿರೋಧಿಸುತ್ತಾರೆ. ವಿಪಕ್ಷದಲ್ಲಿದವರು 5 ವರ್ಷದ ನಂತರ ಆಡಳಿತದ ಚುಕ್ಕಾಣಿ ಹಿಡಿದಾಗ ಅವರೂ ಅದನ್ನೇ ಮುಂದುವರಿಸುತ್ತಾರೆ. ಇದನ್ನು ವಿರೋಧಿಸುವುದು, ಸಭಾತ್ಯಾಗ ಮಾಡಿದರೂ ಅಂತಹ ಕರಡನ್ನು ಆಡಳಿತ ಪಕ್ಷದವರು ಜಾರಿ ಮಾಡುತ್ತಾರೆ. ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯೇ ನಡೆಯುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ನಾವಿರುವಾಗ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯುತ್ತೇವೆಯೇ ಎಂದು ಪ್ರಶ್ನಿಸಿದರು.
ಎಸಿಬಿ ಬಂದ್ ಮಾಡುವುದಾಗಿ ಹೇಳಿದ್ದರು: ಗಣಿ ಕುರಿತಂತೆ 2012ರಲ್ಲಿ ಮೂವರು ಮುಖ್ಯಮಂತ್ರಿ, ಹಲವಾರು ಶಾಸಕರು, ಮಂತ್ರಿಗಳ ವಿರುದ್ಧ ವರದಿ ನೀಡಲಾಗಿತ್ತು. ಆಡಳಿತ ಪಕ್ಷದವರು ಅದನ್ನು ಜಾರಿ ಮಾಡದಿದ್ದಾಗ ವಿರೋಧ ಪಕ್ಷದವರು ಜಾರಿಗಾಗಿ ಒತ್ತಾಯಿಸಿ ಬೆಂಗಳೂನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದರು. ನಂತರ ಅಧಿಕಾರಕ್ಕೆ ಬಂದಾಗ ಅವರೂ ಅದನ್ನು ಜಾರಿ ಮಾಡಲೇ ಇಲ್ಲ. ಇದು ಸರಿಯೇ ಎಂದು ಪ್ರಶ್ನಿಸಿದ ಅವರು, ಎಸಿಬಿ ಬಂದ್ ಮಾಡುವಂತೆ ಕೇಳುತ್ತಿದ್ದವರು ಅಧಿಕಾರಕ್ಕೆ ಬಂದು 24 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದರೂ ಬಂದ್ ಮಾಡಲಿಲ್ಲ. ಕೊನೆಗೆ ನ್ಯಾಯಾಲಯವೇ ಎಚ್ಚರಿಕೆ ನೀಡಬೇಕಾಯಿತು. ನಂತರ ನಾವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟೆವು ಎಂದು ಬಿಂಬಿಸಿಕೊಂಡರೇ ಹೊರತು ಏನನ್ನೂ ಮಾಡಲಿಲ್ಲ ಎಂದು ಕಿಡಿಕಾರಿದರು.
ಇಂತಹ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ಮತದಾರರಿಂದ ಮಾತ್ರ ಸಾಧ್ಯ. ಮತದಾರರು ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಕ್ಷೇತ್ರಕ್ಕೆ ನಿಂತ ವ್ಯಕ್ತಿ ನಮ್ಮ ಹಿತ ಕಾಪಾಡುತ್ತಾನೋ ಇಲ್ಲವೋ ಎಂಬುದನ್ನು ನೋಡಬೇಕು. ಯಾರೂ ಒಳ್ಳೆಯವರಲ್ಲ ಎಂದಾದರೆ ನೋಟಾಕ್ಕೆ ಮತ ಹಾಕಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಬಹಳಷ್ಟು ಹೆಚ್ಚಾಗಬೇಕು. ಜನರಲ್ಲಿ ದೇಶದ ಸೇವೆ ಮಾಡುವಂತಹ ಭಾವನೆ ಮೂಡಿಸುವ ಕೆಲಸವಾಗಬೇಕು. ರಾಜಕೀಯದಲ್ಲಿ ಹಣ ಮಾಡುವುದು, ಅಧಿಕಾರ ಚಲಾಯಿಸುವುದಷ್ಟೇ ಆಗಬಾರದು. ನಮ್ಮ ಪ್ರತಿನಿಧಿಗಳು ಜನರ ಸೇವೆ ಮಾಡುವಂತವರಾಗಬೇಕು. ನಮಗೂ ಅವರಿಗೂ ಒಂದೇ ಕಾನೂನು ಎಂಬುದನ್ನು ಅರಿತು ನಡೆಯುವವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಮತದಾರರು ಮತ ಹಾಕುವಾಗ ಝೀರೋ ಟ್ರಾಫಿಕ್ ಬೇಕಿಲ್ಲ. ಮತ ಪಡೆದು ಪ್ರತಿನಿಧಿಯಾಗಿ ಹೋಗುತ್ತಿದ್ದಾಗ ಎಲ್ಲರನ್ನೂ ನಿಲ್ಲಿಸಿ ಝೀರೋ ಟ್ರಾಫಿಕ್ ಮಾಡಿ ಹೋಗುವಂತಹ ಅವಕಾಶ ಏಕೆ?. ಪ್ರಜಾಪ್ರಭುತ್ವ ಎಂದರೆ ಜನರಿಗಾಗಿ ಇರುವ ಸರ್ಕಾರ. ಇಂತಹ ಯೋಚನೆ ಸಮಾಜದಲ್ಲಿ ಬಂದರೆ ಮಾತ್ರ ನಿಜವಾದ ಪ್ರಜಾಪ್ರಭುತ್ವ ಬರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಾಜನೀತಿಗಳಿವೆ. ಅದೆಲ್ಲಕ್ಕೂ ಮೀರಿದ್ದು ಪ್ರಜಾಪ್ರಭುತ್ವ. ಹಿರಿಯರು ಸ್ವಾತಂತ್ರ್ಯ ಬಂದ ನಂತರ ಚಿಂತಿಸಿ ಕಾಯ್ದೆ ಮಾಡಿದ್ದರು. ಸೇವಾ ಮನೋಭಾವದಿಂದ ಸ್ವಾತಂತ್ರ್ಯ ಹೋರಾಟಗಾರರು ಪ್ರತಿನಿಧಿಗಳಾಗುತ್ತಿದ್ದರು. ಇಂದು ಹಣ, ಅಧಿಕಾರದ ದಾಹಕ್ಕಾಗಿ ಜನಪ್ರತಿನಿಧಿಗಳಾಗುತ್ತಿದ್ದಾರೆ. ಇಂತಹ ವ್ಯವಸ್ಥೆಯನ್ನು ಯುವಜನರು ಬದಲಾಯಿಸಬೇಕಿದೆ. ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ತಿಳಿಸುವ ಕೆಲಸ ಆಗಬೇಕು. ಇಂತಹ ಕೆಲಸವನ್ನು ಯುವಜನರು ಮಾಡಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಿಳಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಇತರರಿದ್ದರು.