

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿಪರ ಆಡಳಿತ ಮತ್ತು ಅಭಿವೃದ್ಧಿ ಕಾಮಗಾರಿಗಳ ಮೂಲಕ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಉಪ ಚುನಾವಣೆ ಜರುಗುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಳ್ಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರವಾಗಿ ಶನಿವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಲವು ಜ್ವಲಂತ ಸಮಸ್ಯೆಗಳು ಪರಿಹಾರವಾಗಿದ್ದರೆ ಅದಕ್ಕೆ ಭಾಜಪ ಯೋಜನೆಗಳೇ ಕಾರಣ. ಅಹರ್ನಿಶಿಯಾಗಿ ದೇಶ ಕಟ್ಟುವ ನೆಲೆಯಲ್ಲಿ ನಮ್ಮ ಸರ್ಕಾರ ಶ್ರಮಿಸುತ್ತಿದೆ. ನಿಮ್ಮ ಸಹಾಯ-ಸಹಕಾರ ಭವಿಷ್ಯದಲ್ಲೂ ಹೀಗೇಯೇ ಮುಂದುವರಿಯಲಿ ಎಂದು ಮನವಿ ಮಾಡಿದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ, ಸ್ಕಿಲ್ ವಿಲ್‌ನಂತಹ ಹತ್ತು ಹಲವು ಯೋಜನೆಗಳು ದೇಶದ ಯುವ ಜನತೆಯಲ್ಲಿ ಹೊಸ ಸಂಚಲನ ಉಂಟುಮಾಡಿದೆ. ಮಾತ್ರವಲ್ಲದೆ, ಸ್ವಾವಲಂಬಿ ಬದುಕಿಗೆ ನೂತನ ಭಾಷ್ಯ ಬರೆದಿದೆ. ದೇಶದ ಹಿತಕ್ಕಾಗಿ ದುಡಿದಾಗ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಮಂಗಲ ಗೆಲುವಿಗೆ ಶ್ರಮಿಸಿ: ಬಿಜಿಪಿ ಸರ್ಕಾರ ಅಲ್ಪಾವಧಿಯಲ್ಲಿ ಅಪರಿಮಿತ ಅಭಿವೃದ್ಧಿ ಕಾರ್ಯ ಕೈಕೊಂಡಿದೆ. ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ. ದಶಕಗಳ ವರೆಗೆ ಕಾಂಗ್ರೆಸ್ ಪಕ್ಷ ಸಾಧಿಸದ್ದನ್ನು ಭಾಜಪ ಸಾಧಿಸಿರುವುದು ದೇಶದ ಪ್ರಜ್ಞಾವಂತ ಜನತೆಗೆ ಗೊತ್ತಿದೆ. ದಿ.ಸುರೇಶ ಅಂಗಡಿ ಅವರು ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಹುಟ್ಟುಹಾಕಿದ್ದರು. ಅವರ ಸೇವೆಯನ್ನು ಯಾರೂ ಮರೆಯುವಂತಿಲ್ಲ ಎಂದ ಅವರು, ಮಂಗಲ ಅಂಗಡಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಡಾ. ಕೋರೆ ವಿನಂತಿಸಿದರು. ಶಾಸಕ ಅಭಯ ಪಾಟೀಲ, ಗ್ರಾಪಂ ಸದಸ್ಯರು, ಬಿಜೆಪಿ ಕಾರ್ಯಕರ್ತರು ಇದ್ದರು.