

ಮೈಸೂರು: ನಾನು ಹಾಸ್ಯ ನಟನಾಗಿ ಸುಮಾರು 200ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಪಾತ್ರ ನಿರ್ವಹಿಸಿರುವ ಕುಟಂಬ ಸಮೇತ ನೋಡಬಹುದಾದ ಉಪಾಧ್ಯಕ್ಷ ಚಲನಚಿತ್ರ ಜ.26ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಸಿನಿಮಾ ನೋಡಿ ಬೆಂಬಲಿಸಬೇಕೆಂದು ನಟ ಚಿಕ್ಕಣ್ಣ ಮನವಿ ಮಾಡಿದರು.
ಮೂಲತಃ ಮೈಸೂರಿನವನೇ ಆದ ನಾನು ಚಲನಚಿತ್ರ ರಂಗ ಪ್ರವೇಶಕ್ಕೂ ಮುನ್ನ ಗಾರೆ ಕೆಲಸ ಮಾಡುತ್ತಿದ್ದೆ. ಬಳಿಕ ಪ್ರೇಕ್ಷಕರ ಆಶೀರ್ವಾದದಿಂದ ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿದ್ದು, ಈಗ ಪ್ರಥಮ ಬಾರಿಗೆ ನಾಯಕ ನಟರಾಗಿ ನಟಿಸುವ ಅವಕಾಶ ಉಪಾಧ್ಯಕ್ಷ ಚಿತ್ರದ ಮೂಲಕ ದೊರೆತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದಲ್ಲಿ ದ್ವಂದ್ವಾರ್ಥದ ಸಂಭಾಷಣೆ, ಮುಜುಗರ ಉಂಟು ಮಾಡುವ ದೃಶ್ಯಗಳಿಲ್ಲ. ನಮ್ಮ ಈ ಹಿಂದಿನ ಅಧ್ಯಕ್ಷ ಚಲನಚಿತ್ರದ ಮುಂದುವರಿದ ಭಾಗವಾಗಿದೆ. ಆ ಚಲನ ಚಿತ್ರದಲ್ಲಿದ್ದ ಬಹುತೇಕ ನಟರು ಇದರಲ್ಲಿಯೂ ನಟಿಸಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಜನರಿಗೆ ಇಷ್ಟವಾಗಿವೆ. ಚಿತ್ರಮಂದಿರಕ್ಕೆ ಬರುವ ಎಲ್ಲರೂ ಮನಸಾರೆ ನಗಲಿದ್ದಾರೆ. ಹೀಗಾಗಿ ಚಿತ್ರಮಂದಿರಕ್ಕೆ ಭೇಟಿ ನೀಡಿ ನಮ್ಮ ಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದರು.
ನಾಯಕ ನಟಿ ಮಲೈಕಾ, ನಿರ್ದೇಶಕ ಅನಿಲ್ ಕುಮಾರ್, ನಟರಾದ ಬಾಲಸುಬ್ರಹ್ಮಣ್ಯಂ, ಧರ್ಮಣ್ಣ ಹಾಜರಿದ್ದರು.