ತತ್ವ ಸಿದ್ಧಾಂತ ಮರೆತರೆ ಭವಿಷ್ಯವಿಲ್ಲ

web 2
Published on

ಚಿಕ್ಕಮಗಳೂರು: ಪಕ್ಷದ ತತ್ವ, ಸಿದ್ಧಾಂತವನ್ನು ಮರೆತರೆ ಭವಿಷ್ಯ ಇರುವುದಿಲ್ಲ. ಈ ದಿಸೆಯಲ್ಲಿ ಪ್ರಶಿಕ್ಷಣ ವರ್ಗಗಳಲ್ಲಿ ತಿಳಿದುಕೊಂಡ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಕೆಳಹಂತದ ಕಾರ್ಯಕರ್ತರಿಗೆ ತಿಳಿಸಬೇಕು ಎಂದು ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ಹಾಗೂ ಗ್ರಾಮಾಂತರ ಮಂಡಲದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಕಾರ ಮತ್ತು ದೇಶಭಕ್ತಿ ಬಿತ್ತುವುದು ಜನಸಂಘದ ಉದ್ದೇಶವಾಗಿತ್ತು. ಈಗಲೂ ಬಿಜೆಪಿ ಅದನ್ನು ಮುಂದುವರಿಸಿಕೊಂಡು ಬಂದಿದೆ. ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸಿದರೆ ಬೇರೆ ರಾಷ್ಟ್ರಕ್ಕಿಂತ ನಮ್ಮ ದೇಶದವರೇ ಕಾಯ್ದೆ ವಿರುದ್ಧ ಘೊಷಣೆ ಕೂಗುತ್ತಿರುವುದು ವಿಪರ್ಯಾಸ ಎಂದರು.

ಕಲಂ 370, ತ್ರಿವಳಿ ತಲಾಕ್ ತೆಗೆಯಲು ಸಾಧ್ಯವೇ? ಅಂದುಕೊಂಡವರಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಟ್ಟಿದ್ದಾರೆ. ಏನೇ ಎಡರು ತೊಡರುಗಳು ಬಂದರೂ ಸರಿಪಡಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಶಕ್ತಿ ನಮ್ಮ ಕಾರ್ಯಕರ್ತರು ಮತ್ತು ಪಕ್ಷಕ್ಕಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ದೇಶವನ್ನು ಆಳಿದ ಕಾಂಗ್ರೆಸ್ ರಾಜಪ್ರಭುತ್ವಕ್ಕೆ ಬೆಲೆ ನೀಡುತ್ತ ವಂಶಪಾರಂಪರ್ಯ ಆಡಳಿತ ನಡೆಸಿದೆ. ಆದರೆ ಬಿಜೆಪಿಯಲ್ಲಿ ಜನಸಾಮಾನ್ಯರ ಪ್ರೀತಿಗೆ ಪಾತ್ರವಾಗಿ ಸಾಮಾನ್ಯ ಜನರ ಒಡನಾಟದಿಂದ ಉದಯವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net