ಉಪ ಚುನಾವಣೆ ಮೇಲೆ ಸಿಡಿ ಪರಿಣಾಮ ಬೀರದು - ಜಗದೀಶ ಶೆಟ್ಟರ್

jagadish
Published on

ಬೆಳಗಾವಿ: ಸಿಡಿ ಪ್ರಕರಣವು ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೂ, ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಸಿಡಿ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡುತ್ತಿದೆ. ಹೀಗಾಗಿ ಈ ವಿಷಯ ಇಲ್ಲಿ ಚರ್ಚಿಸುವುದು ಬೇಡ. ನಾನು ಇಲ್ಲಿ ಮಾತನಾಡುವುದೂ ಸರಿಯಲ್ಲ ಎಂದು ತಿಳಿಸಿದರು.

ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಲ ಅವರು ಮಾ. 30ರಂದು 12 ಗಂಟೆಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್, ಪಕ್ಷದ ಮುಖಂಡರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು. ಎಲ್ಲ ಸರ್ಕಾರಗಳು ಇದ್ದಾಗಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಅದೇನೂ ಹೊಸದಲ್ಲ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಪತನವಾಗುತ್ತಿದೆ.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕೂಡಾ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಒಟ್ಟಿನಲ್ಲಿ ವಿಳಾಸ ಇಲ್ಲದಂತೆ ಆಗಿದೆ ಎಂದು ಕುಟುಕಿದರು. ರಾಷ್ಟ್ರೀಯ ಪಕ್ಷ ಅಂದ ಮೇಲೆ ಸ್ಪರ್ಧೆ ಮಾಡಲು ಬಯಸಿ ಟಿಕೆಟ್ ಕೇಳುವುದು ಸಾಮಾನ್ಯ. ಹೈಕಮಾಂಡ್ ಘೋಷಣೆ ಮಾಡಿದೆ. ಈಗ ಎಲ್ಲರೂ ಒಪ್ಪಿಕೊಂಡು ಕಾರ್ಯ ಮಾಡುವುದು ನಮ್ಮ ಪಕ್ಷದ ನಿಯಮ. ಎಲ್ಲರೂ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಶೆಟ್ಟರ್ ಉತ್ತರಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ರಾಜೇಂದ್ರ ಹರಕುಣಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಪಠಾಣ, ಬಿಜೆಪಿ ವಕ್ತಾರ ಎಂ.ಬಿ. ಝಿರಲಿ, ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net