

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನಿಂದ ತಾಂತ್ರಿಕ ಹಾಗೂ ನಿರ್ವಹಣಾ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯಿಂದ ಅನುಮೋದನೆ ಪಡೆದು ಎಂ.ಸಿ.ಎ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಆರಂಭಿಸಲಾಗುತ್ತಿದೆ ಎಂದು ವಿವಿಯ ಉಪ ಕುಲಪತಿ ಪ್ರೊ.ಶಿವಚಿತ್ತಪ್ಪ ತಿಳಿಸಿದರು.
ವಿವಿಯು ಯಾವುದೇ ಪದವಿಯನ್ನು ಸ್ವತಃ ಪ್ರಾರಂಭಿಸಬಹುದಾಗಿದೆ. ಅದರಂತೆ ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ಅನುಮೋದನೆಯೊಂದಿಗೆ ಮೈಸೂರು ವಿವಿಯ ಪರಿನಿಯಮಾವಳಿಯಂತೆ ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ವ್ಯಾಸಂಗ ಮಾಡಿದವರು ಎಂಸಿಎಗೆ ಹಾಗೂ ಬಿ.ಕಾಂ, ಬಿ.ಬಿ.ಎ ಸೇರಿದಂತೆ ಯಾವುದೇ ಪದವಿ ಪಡೆದವರು ಎಂ.ಬಿ.ಎ ಪದವಿಗೆ ಪ್ರವೇಶಾತಿ ಪಡೆಯಬಹುದಾಗಿದೆ. ಎಂ.ಬಿ.ಎ ಪದವಿ ಪಡೆಯಲು ರಾಜ್ಯದವರಿಗೆ 75,000 ರೂ, ಹೊರ ರಾಜ್ಯದವರಿಗೆ 1,12,000 ರೂ ಶುಲ್ಕವಿದೆ. ಎಂ.ಸಿ.ಎ ಪದವಿಗೆ ರಾಜ್ಯದವರೆಗೆ 49,512 ರೂ ಹಾಗೂ ಹೊರ ರಾಜ್ಯದವರಿಗೆ 75,930 ರೂ ಶುಲ್ಕ ನಿಗದಿಪಡಿಸಲಾಗಿದೆ. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು 23,678 ರೂ ವಿನಾಯಿತಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕುಲಸಚಿವ ಪ್ರೊ.ಯೋಗನರಸಿಂಹಚಾರಿ, ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯ ನಾಗರಾಜ್, ಡಾ.ಎಲ್.ಎಸ್.ಸುರೇಶ್ ಇತರರಿದ್ದರು.