ಉದ್ಯೋಗಕ್ಕೆ ಮಾಧ್ಯಮವಲ್ಲ ಕೌಶಲ್ಯ ಮುಖ್ಯ

Vice-Chancellor
Published on

ಉಡುಪಿ: ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗ ಪಡೆಯಲು ಕಷ್ಟ ಎಂಬ ತಪು$್ಪ ಕಲ್ಪನೆ ಸಮಾಜದಲ್ಲಿದೆ. ವಾಸ್ತವದಲ್ಲಿ ಉದ್ಯೋಗಕ್ಕೂ ಕನ್ನಡಕ್ಕೂ ಸಂಬಂಧವಿಲ್ಲ. ಇಂಗ್ಲಿಷ್​ ಮಾಧ್ಯಮದಲ್ಲಿ ಓದಿವರಿಗೆಲ್ಲಾ ಕೆಲಸ ಖಚಿತವಿಲ್ಲ. ಯಾವುದೇ ಮಾಧ್ಯಮದಲ್ಲಿ ಓದಿದರೂ ಕೌಶಲ್ಯವಿದ್ದರೆ ಅಭ್ಯರ್ಥಿಗಳನ್ನು ಕರೆದು ಕೆಲಸ ನೀಡುತ್ತಾರೆ ಎಂದು ಮಂಗಳೂರು ವಿವಿ ಉಪಕುಲಪತಿ ಡಾ. ಪಿ.ಎಲ್​. ಧರ್ಮ ಹೇಳಿದರು.

ರಾಜಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ನಡೆದ ಜಿಲ್ಲಾ ಸಮ್ಮೇಳನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ಭಾಷಾಂತರಕಾರರಿಗೆ ಬಹಳಷ್ಟು ಬೇಡಿಕೆ ಇದ್ದು, ಕನ್ನಡದಿಂದ ಇಂಗ್ಲಿಷ್​ಗೆ ಮತ್ತು ಇಂಗ್ಲಿಷ್​ ನಿಂದ ಕನ್ನಡಕ್ಕೆ ಭಾಷಾಂತರ ಮಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಅಗತ್ಯವಿದೆ. ಹೀಗಾಗಿ ಯಾವುದೇ ಭಾಷೆಯನ್ನು ಸಮಗ್ರವಾಗಿ ಅಧ್ಯಯನ ಮಾಡುವುದು ಅವಶ್ಯ ಎಂದರು.

ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ನೀಡುವ ಮತ್ತು ಮಕ್ಳಿಗೆ ಮನದಟ್ಟಾಗುವಂತೆ ಬೋಧಿಸುವ ಕೌಶಲ ಹೊಂದಿರುವ ಶಿಕ್ಷಕರ ಕೊರತೆ ಇದೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 1.40 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಅಂಕಪಟ್ಟಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕನ್ಸಾಲಿಡೇಟೆಡ್​ ಮಾಕ್ಸ್​ ಕಾರ್ಡ್​ ಮುದ್ರಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಸೇರಲು ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಸಾಂಸತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಕಡ್ಡಾಯ ಹಾಜರಾತಿ ನೀಡಬೇಕು. ನೀಡದಿದ್ದರೆ ವಿವಿಗೆ ದೂರು ಸಲ್ಲಿಸಬಹುದು ಎಂದರು.

ಮಂಗಳೂರಿಗೆ ಬರಬೇಕಿಲ್ಲ

ವಿದ್ಯಾರ್ಥಿಗಳು ಪ್ರತಿ ಕೆಲಸಕ್ಕೆ ಮಂಗಳೂರು ವಿವಿಗೆ ಬರಬೇಕಿಲ್ಲ. ಆಯಾ ಕಾಲೇಜಿನ ಪ್ರಾಂಶುಪಾಲರು ಅರ್ಜಿಯನ್ನು ಸ್ವೀಕರಿಸಿ ವಿವಿಗೆ ಅಂಚೆ ಮೂಲಕ ರವಾನಿಸಬಹುದು. ತುಂಬಾ ಅರ್ಜಿಗಳಿದ್ದರೆ ಟಿಎ ಮತ್ತು ಡಿಎ ಕೊಟ್ಟು ಸಿಬ್ಬಂದಿಯನ್ನು ಕಳುಹಿಸಿಕೊಡಲು ಅವಕಾಶವಿದೆ. ಪ್ರಾಂಶುಪಾಲರು ಈ ಬಗ್ಗೆ ಗಮನಹರಿಸಬೇಕು ಎಂದರು.

ಸರ್ಕಾರದಿಂದ 5 ಪೈಸೆ ಅನುದಾನವಿಲ್ಲ

ಕೋವಿಡ್​ ಸಂಕಷ್ಟ ಕಾಲದ ಬಳಿಕ ಮಂಗಳೂರು ವಿವಿಗೆ ಸರ್ಕಾರದಿಂದ 5 ಪೈಸೆ ಅನುದಾನ ಬಂದಿಲ್ಲ. ವಿದ್ಯಾರ್ಥಿಗಳು ನೀಡಿದ ಶುಲ್ಕದಲ್ಲೇ ವಿವಿ ಖರ್ಚು ವೆಚ್ಚ ಭರಿಸಲಾಗುತ್ತಿದೆ. ಕೆಲವು ಕಾಲೇಜಿನಲ್ಲಿ ಶೌಚಾಲಯ ಸ್ವಚ್ಛತೆಗೂ ಸಿಬ್ಬಂದಿ ನೇಮಕಾತಿಗೆ ಹಣವಿಲ್ಲ. ಹೀಗಾಗಿ ಕೋರ್ಸ್​ಗಳಿಗೆ ಶೇ. 10ರಷ್ಟು ಹೆಚ್ಚುವರಿ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ ಎಂದರು.

ಸಮ್ಮೇಳನಾಧ್ಯಕ್ಷ ಡಾ. ವಿಷ್ಣು ಭಟ್​ ಪಾದೇಕಲ್ಲು ಅಧ್ಯಕ್ಷತೆ ವಹಿಸಿದ್ದರು. ಅಜ್ಜರಕಾಡು ಮಹಿಳಾ ಕಾಲೇಜು, ಪೂರ್ಣಪ್ರಜ್ಞ ಕಾಲೇಜು, ಎಂಜಿಎಂ ಕಾಲೇಜು, ತೆಂಕನಿಡಿಯೂರು ಕಾಲೇಜು, ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net