ನಾಳೆಯಿಂದ ವಿಭೂತಿಪುರ ವೀರಭದ್ರೇಶ್ವರ ಜಾತ್ರೆ; ಜಾನಪದ ವಿಭೂತಿ, ಸುವರ್ಣಶ್ರೀ ಪ್ರಶಸ್ತಿ ಪ್ರದಾನ

vibuthi
Published on

ಬೆಂಗಳೂರು: ಎಚ್‌ಎಎಲ್ ಸಮೀಪ ಇರುವ ಪ್ರಾಚೀನ ವಿಭೂತಿಪುರ ವೀರಸಿಂಹಾಸನ ಮಠದ ಶ್ರೀವೀರಭದ್ರೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ಮತ್ತು ಸೋಮವಾರ ಹಮ್ಮಿಕೊಳ್ಳಲಾಗಿದೆ.

ಭಾನುವಾರ ಬೆಳಗ್ಗೆ ವೀರಶೈವ ಧ್ವಜಾರೋಹಣದೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸಾಮೂಹಿಕ ಶಿವದೀಕ್ಷಾ, ಶ್ರೀಮಠದ ವಿದ್ಯಾರ್ಥಿಗಳ ವಸ್ತುಪ್ರದರ್ಶನ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಂಜೆ ಸುಮಂಗಲೆಯರ ಪೂರ್ಣಕುಂಭ ಮತ್ತು ವಿವಿಧ ಜಾನಪದ ಮೇಳದೊಂದಿಗೆ ಶ್ರೀಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರ ಮತ್ತು ಲಿಂಗೈಕ್ಯ ಸುವರ್ಣಲಿಂಗ ಶಿವಾಚಾರ್ಯರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ನಂತರ ನಡೆಯುವ ಸಮಾರಂಭದಲ್ಲಿ ಭಜನಾ ಕಲಾವಿದ ಆಕಾಶ ಮನುಗೂಳಿಯವರಿಗೆ ‘ಜಾನಪದ ವಿಭೂತಿ’ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ರಾಜಾಪುರ, ಕೆರೂರು, ಚಿಕ್ಕಕಲ್ಲುಬಾಳು, ಅಕ್ಕಿಆಲೂರು, ಚನ್ನಗಿರಿ ಸರ್ಪಭೂಷಣ ಮಠದ ಶ್ರೀಗಳು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ನ.25ರಂದು ಕಾರ್ತೀಕ ಸೋಮವಾರ ಬೆಳಗ್ಗೆ ವೀರಭದ್ರ ಸ್ವಾಮಿಯ ಗುಗ್ಗುಳ, (ಕೆಂಡೋತ್ಸವ) ಹಾಗೂ ರಥೋತ್ಸವ ನಡೆಯಲಿದ್ದು ನಂತರ ನಡೆಯುವ ಧರ್ಮ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ ಅವರಿಗೆ ಪ್ರತಿಷ್ಠಿತ ‘ಸುವರ್ಣಶ್ರೀ’ ಪ್ರಶಸ್ತಿ ಪ್ರದಾನ ನಡೆಯಲಿದೆ. ನೊಣವಿನಕೆರೆ ಶ್ರೀಕರಿವೃಷಭ ದೇಶೀಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಶ್ರೀಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಕೊಟ್ಟೂರು, ಶಿವಗಂಗೆ ಮತ್ತಿತರ ಮಠಗಳ ಶ್ರೀಗಳು, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net