ವಿಭೂತಿಪುರ ಮಠದ 2024ನೇ ಸಾಲಿನ ಸುವರ್ಣಶ್ರೀ, ಜಾನಪದ ವಿಭೂತಿ ಪ್ರಶಸ್ತಿ ಪ್ರಕಟ

Vibhuthi
Published on

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಶ್ರೀ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ 2024ನೇ ಸಾಲಿನ ಸುವರ್ಣಶ್ರೀ ಮತ್ತು ಜಾನಪದ ವಿಭೂತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

94 ವರ್ಷದ ಹಿರಿಯ ಸಂಶೋಧಕರು, ಶ್ರೇಷ್ಠ ಇತಿಹಾಸ ತಜ್ಞರು ಹಾಗೂ ಸಾಹಿತಿಗಳಾದ ಡಾ. ಎಂ. ಜಿ. ನಾಗರಾಜ ಸುವರ್ಣ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿಯು 50 ಸಾವಿರ ನಗದು, ಕಂಚಿನ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿದೆ.

ನ.25 ರ ಸೋಮವಾರ ಬೆಳಗ್ಗೆ 11.00 ಗಂಟೆಗೆ ಶ್ರೀಮಠದಲ್ಲಿ ನಡೆಯುವ ಶ್ರೀವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾರಂಭದಲ್ಲಿ ನೊಣವಿನಕೆರೆಯ ಶ್ರೀ ಡಾ. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕೊಟ್ಟೂರು ಚಾನುಕೋಟಿ ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.

ಜಾನಪದ ವಿಭೂತಿ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಪ್ರಸಿದ್ಧ ಭಜನಾ ಕಲಾವಿದ ಆಕಾಶ ಮನಗೂಳಿ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು 25 ಸಾವಿರ ನಗದು, ತಾಮ್ರದ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ನ.24 ಭಾನುವಾರ ಸಂಜೆ 6.00 ಗಂಟೆಗೆ ಶ್ರೀಮಠದ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯುವ ಜಾನಪದೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಬೆಂಗಳೂರೀನ ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆಂದು ಶ್ರೀಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net