

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಪ್ರಸಕ್ತ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಮಡಿಲ ಕೂಸಿಗೆ ಮಣ್ಣಿನ ಸೆರಗು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಈ ಪುರಸ್ಕಾರವು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.
‘ಈ ಕಾಲದ ಎಲ್ಲ ತಲ್ಲಣ ಮತ್ತು ಆತಂಕಗಳಿಗೆ ಒಂದು ಕ್ರಿಯಾಶೀಲವಾದ ಪ್ರತಿಕ್ರಿಯೆಯಾಗಿ ತುಂಬ ವಿಭಿನ್ನ ನೆಲೆಯ ಕಾವ್ಯಗುಣಗಳನ್ನು ಹೊಂದಿರುವುದರಿಂದ ಮತ್ತು ಪ್ರಸ್ತುತ ಸಮಾಜದಲ್ಲಿ ತಲೆದೋರಿರುವ ಅನೇಕ ವೈರುಧ್ಯಗಳಿಗೆ ವೈಯಕ್ತಿಕ ಅಥವಾ ಸಾಮಾಜಿಕ ಎರಡಕ್ಕೂ ಸಮಾನವಾಗಿ ಸ್ಪಂದಿಸುವ ಗುಣ ಹೊಂದಿರುವುದರಿಂದ ‘ಮಡಿಲ ಕೂಸಿಗೆ ಮಣ್ಣಿನ ಸೆರಗು’ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ತೀರ್ಪಗಾರರಾದ ವಿಮರ್ಶಕರಾದ ಡಾ. ಸಿರಾಜ್ ಅಹಮದ್ ಮತ್ತು ಡಾ. ವಿಜಯಾ ಗುತ್ತಲ ಅಭಿಪ್ರಾಯಪಟ್ಟಿದ್ದಾರೆ.
ಕವಿ ಪರಿಚಯ: ಸಂತೆಬೆನ್ನೂರು ಫೈಜ್ನಟ್ರಾಜ್ ಹುಟ್ಟಿದ್ದು 1972 ರಲ್ಲಿ, ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕು ಸಂತೆಬೆನ್ನೂರಿನಲ್ಲಿ. ದಾವಣಗೆರೆಯ ಡಯಟ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಅವರು, ಕಥೆ, ಕವಿತೆ, ಪ್ರಬಂಧ, ಮಕ್ಕಳ ಸಾಹಿತ್ಯ, ಹೀಗೆ ವಿವಿಧ ಪ್ರಕಾರಗಳಲ್ಲಿ ಆಸಕ್ತಿಯುಳ್ಳವರು. ಈಗಾಗಲೇ 14 ಕೃತಿಗಳು ಹೊರಬಂದಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.