

ಹುಬ್ಬಳ್ಳಿ: ಡಾ. ಪ್ರಹ್ಲಾದ ಅಗಸನಕಟ್ಟೆ 2024ನೇ ಸಾಲಿನ ವಿದ್ಯಾರ್ಥಿ ಕಥಾ ಪ್ರಶಸ್ತಿಯು ಸಂಜಯ್ ಚಿತ್ರದುರ್ಗ ಅವರ "ದ್ಯಾಮಜ್ಜಿ ಪುರಾಣ' ಹಸ್ತಪ್ರತಿಗೆ ದೊರೆತಿದೆ.
ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಲಕ ಒಳಗೊಂಡಿದೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆಯುವ ಸತತ ಏಳನೇ ವರ್ಷದ ಸ್ಪರ್ಧೆ ಇದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ತಿಂಗಳಲ್ಲಿ ನೆರವೇರಿಸಲಾಗುವುದು.
ಕಥೆಗಾರರಾದ ಭಾಗ್ಯಜ್ಯೋತಿ ಹಿರೇಮಠ ಮತ್ತು ಲಿಂಗರಾಜ ಸೊಟ್ಟಪ್ಪನವರ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು ಎಂದು ಅಕ್ಷರ ಸಾಹಿತ್ಯ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಥೆಗಾರರ ಪರಿಚಯ:
ಪ್ರಶಸ್ತಿ- ಪಡೆದ ಸಂಜಯ್ ಅವರದು ಮೂಲತಃ ಚಿತ್ರದುರ್ಗ ಜಿಲ್ಲೆ. ಸದ್ಯ ಉಜಿರೆಯ ಎಸ್ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ. ಸಮಕಾಲೀನ ಕನ್ನಡ ಸಾಹಿತ್ಯ, ಸಿನಿಮಾ ಮತ್ತು ಬರವಣಿಗೆಯಲ್ಲಿ ಆಸಕ್ತಿ. ಹಲವಾರು ಬರಹಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.