ಕ್ರೀಡಾಕೂಟಗಳಿಂದ ನಾಯಕತ್ವದ ಗುಣ ವೃದ್ಧಿ

vijayapura sprots
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ವಿಮಲಾ ಬಸವರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಹೋಬಳಿಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಾತನಾಡಿದರು.
ಕ್ರೀಡಾಕೂಟಗಳಿಂದ ನಾಯಕತ್ವದ ಗುಣ ಬೆಳೆಯುತ್ತದೆ. ಜೀವನದ ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತಹ ಮಾನಸಿಕ ಸ್ಥೈರ್ಯ ವೃದ್ಧಿಸಲಿದೆ. ಆದ್ದರಿಂದ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು, ಶಿಕ್ಷಕರ ಮಾರ್ಗದರ್ಶನದಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರೆ ಗೆಲುವು ಪಡೆಯಬಹುದು ಎಂದರು.
ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳುವ ಉತ್ತಮ ಅಭ್ಯಾಸಗಳು ಭವಿಷ್ಯದಲ್ಲಿ ನಮ್ಮನ್ನು ಕೈಹಿಡಿಯಲಿವೆ. ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಸಾಗಿದರೆ, ಯಶಸ್ಸು ನಮ್ಮದಾಗಲಿದೆ. ಓಧಿನಲ್ಲಿ ಹಿಂದುಳಿದ ಬಹಳಷ್ಟು ಮಂದಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧಕರಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಹೋಬಳಿಯ 22 ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಬಾಲಕಿಯರಿಗಾಗಿ ಗುಂಪು ಆಟಗಳು, ಬಾಲಕರಿಗೆ ಅಥ್ಲೆಟಿಕ್ಸ್ ಕ್ರೀಡೆಗಳು ಹಮ್ಮಿಕೊಳ್ಳಲಾಗಿತ್ತು. 650 ಮಂದಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಟಿಪಿಒ ವೆಂಕಟೇಶ್, ಮುಖ್ಯಶಿಕ್ಷಕರಾದ ಅಶ್ವತ್ಥನಾರಾಯಣ, ಸವಿತಾ, ಚಂದ್ರಶೇಖರ್, ಮುನಿಯಪ್ಪ, ಪುಟ್ಟಸ್ವಾಮಿ, ಜೆ.ಆರ್.ಮುನಿವೀರಣ್ಣ, ಮಂಜುನಾಥ್, ಎಚ್.ಎಂ.ರೋಹಿಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net