19ರಂದು ಜೈ ಶ್ರೀರಾಮ್ ಘೋಷಣೆಯೊಂದಿಗೆ ಹರತಾಳ

VHP-780x470
Published on



ಮಂಗಳೂರು : ನಗರದ ಖಾಸಗಿ ಶಾಲೆಯ ಶಿಕ್ಷಕಿ ಹಿಂದು ದೇವರನ್ನು ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಹಾಗೂ ಮನಪಾ ಸದಸ್ಯರ
ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ವಿಶ್ವಹಿಂದು ಪರಿಷತ್ ಫೆ.19ರಂದು ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎದುರು ಜೈ ಶ್ರೀರಾಮ್ ಘೋಷಣೆಯೊಂದಿಗೆ ಹರತಾಳ ನಡೆಯಲಿದೆ.
ಶ್ರೀರಾಮದೇವರಿಗೆ ಜೈಕಾರ ಹಾಕಿರುವುದಕ್ಕೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಹಿಂದು ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಕೇಸು ದಾಖಲಿಸುವುದರೊಂದಿಗೆ ಶ್ರೀರಾಮದೇವರಿಗೆ ಅವಮಾನ ಮಾಡಿದೆ. ಇದನ್ನು ಹಿಂದು ಸಮಾಜ ಸಹಿಸುವುದಿಲ್ಲ ಎಂದು ಎಂದು ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಕ್ಷಣ ಶಿಕ್ಷಕಿ ಸಿಸ್ಟರ್ ಪ್ರಭಾ ಅವರ ಮೇಲೆ ಕೇಸು ದಾಖಲಿಸಿ, ಬಂಧಿಸಬೇಕು, ಶಾಸಕರು, ಶರಣ್ ಪಂಪ್‌ವೆಲ್, ಇಬ್ಬರು ಮನಪಾ ಸದಸ್ಯರ ಮೇಲಿನ ಪ್ರಕರಣವನ್ನು ವಾಪಸು ಪಡೆಯಬೇಂದು ಆಗ್ರಹಿಸಿ ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎದುರು ಹರತಾಳ ನಡೆಯಲಿದೆ ಎಂದು ಅವರು ತಿಳಿಸಿದರು.
ಶ್ರೀ ರಾಮದೇವರಿಗೆ ಅಪಮಾನ ಮಾಡಿ ನಿಂದಿಸಿ ನಾಗದೇವರನ್ನು, ಗಣಪತಿ ದೇವರನ್ನು ಅವಮಾನಿಸಿ, ಹಿಂದುಗಳಿಗೆ ಅಸ್ತಿತ್ವವಿಲ್ಲ ಎಂದು ಹಿಂದುಗಳನ್ನು ಅವಮಾನಿಸಿದ, ದೇಶದ ಪ್ರಧಾನಿಯನ್ನು ನರಮೇಧ ಮಾಡಿದವರೆಂದು ಅವಹೇಳನ ಮಾಡಿ ಮಕ್ಕಳಿಗೆ ಕ್ರೂರತೆಯನ್ನು ಬೋಧಿಸಿದ ಶಿಕ್ಷಕಿ ಸಿಸ್ಟರ್ ಪ್ರಭಾ ಅವರ ಮೇಲೆ ಶಾಲಾ ಮಕ್ಕಳ ಪೋಷರು ಭಾನುವಾರ ಪಾಂಡೇಶ್ವರ ಠಾಣೆಗೆ ದೂರು ನೀಡಿದರೂ, ದೂರು ದಾಖಲಿಸಿಲ್ಲ. ಆದರೆ, ನ್ಯಾಯ ಕೇಳಲು ತೆರಳಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಕೇಳಿದರೆ, ನಮಗೆ ಒತ್ತಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಶ್ರೀರಾಮ್ ಘೋಷನೆ ಕೂಗುವುದು ದೇಶದ್ರೋಹವೇ? ಎಂದು ಶಿವಾನಂದ ಮೆಂಡನ್ ಪ್ರಶ್ನಿಸಿದರು.
ಶಿಕ್ಷಕಿಯಿಂದ ಹಿಂದು ದೇವರ ಅವಹೇಳನ ಪ್ರಕರಣದಲ್ಲಿ ನಾವು ಕಾನೂನು ಮೀರಿ ವರ್ತಿಸಿಲ್ಲ. ನ್ಯಾಯ ಕೇಳಿದ್ದೇವೆ. ವಿದ್ಯಾರ್ಥಿಗಳ ಪೋಷಕರು ದೂರು ನೀಡಿದರೂ, ಪೊಲೀಸರು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಡಿಡಿಪಿಐ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಸರ್ಕಾರಕ್ಕೆ
ತಾಕತ್ತಿದ್ದರೆ ಶರಣ್ ಪಂಪ್‌ವೆಲ್, ಶಾಸಕರನ್ನು ಬಂಧಿಸಲಿ. ವಿಹಿಂಪ ಬಜರಂಗದಳದ ತಾಕತ್ತು ಏನು ಎಂಬುದನ್ನು ನಾವು ತೋರಿಸುತ್ತೇವೆ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ, ಬಜರಂಗದಳ ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಳ್ಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net