10ರಂದು ಉಡುಪಿಗೆ ಶೌರ್ಯ ಜಾಗರಣ ರಥಯಾತ್ರೆ

sunil kr
Published on

ಉಡುಪಿ: ವಿಶ್ವ ಹಿಂದು ಪರಿಷತ್​ನ 60ನೇ ವರ್ಷಾಚರಣೆ ಪ್ರಯುಕ್ತ ದೇಶಾದ್ಯಂತ ಯುವ ಸಂಘಟನೆಯಾದ ಬಜರಂಗದಳ ನೇತೃತ್ವದಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದ್ದು, ಅಕ್ಟೋಬರ್​ 10ರಂದು ಉಡುಪಿಗೆ ಆಗಮಿಸಲಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನೀಲ್​ ಕೆ.ಆರ್​. ಮಾಹಿತಿ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ದೇಶದಲ್ಲಿ ಹಿಂದು ಸಮಾಜ ಎದುರಿಸುತ್ತಿರುವ ಸವಾಲು ಹಾಗೂ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವುದೇ ಈ ರಥಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಶೌರ್ಯ ಜಾಗರಣ ರಥದ ಬೃಹತ್​ ಶೋಭಾಯಾತ್ರೆ ನಡೆಯಲಿದೆ. ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಮತ್ತು ಉದ್ಯಮಿ ಕಡ್ತಲ ವಿಶ್ವನಾಥ ಪೂಜಾರಿ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಹಿಂದು ಸಮಾಜೋತ್ಸವ

ಮಧ್ಯಾಹ್ನ 4 ಗಂಟೆಗೆ ಎಂಜಿಎಂ ಮೈದಾನದಲ್ಲಿ ಬೃಹತ್​ ಹಿಂದು ಸಮಾಜೋತ್ಸವ ನಡೆಯಲಿದೆ. 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಾಯಿರಾಧ ಗ್ರೂಪ್ಸ್​ ಉಡುಪಿಯ ಮನೋಹರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಮಠದ ಈಶಪ್ರಿಯ ತೀರ್ಥರು, ಮಧ್ಯಪ್ರದೇಶದ ಅಖಿಲೇಶ್ವರಾನಂದ ಮಹಾರಾಜ್​, ಇವರು ಸಾನ್ನಿಧ್ಯ ವಹಿಸಲಿದ್ದಾರೆ. ವಿಎಚ್​ಪಿ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್​, ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ ಎಂದರು.

ಮಹಿಷ ನವರಾತ್ರಿಗೆ ವಿರೋಧ
ದೇಶದಲ್ಲಿ ನವರಾತ್ರಿಯನ್ನು ಅತ್ಯಂತ ಶ್ರದ್ಧಾ&ಭಕ್ತಿಯಿಂದ ಸಮಸ್ತ ಹಿಂದುಗಳು ತಲೆತಲಾಂತದರಿಂದ ಆಚರಿಸುತ್ತ ಬಂದಿದ್ದಾರೆ. ಆದರೆ, ಪ್ರಸಕ್ತ ವರ್ಷ ಬುದ್ಧೀಜಿವಿಗಳು ಎಂದು ಕರೆದುಕೊಳ್ಳುವ ಅಸುರಿ ಮನೋಭಾವದವರು ದಸರಾ ಹಬ್ಬದ ಸಂದರ್ಭದಲ್ಲಿ ಮಹಿಷ ನವರಾತ್ರಿ ಆಚರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ವಿಶ್ವಹಿಂದು ಪರಿಷತ್​ ಬಜರಂಗದಳದ ಪ್ರಬಲ ವಿರೋಧವಿದೆ. ಅಲ್ಲದೆ, ಎಲ್ಲಿಯೇ ಮಹಿಷ ನವರಾತ್ರಿ ಆಚರಿಸುತ್ತಿರುವುದು ಕಂಡುಬಂದರೆ ನುಗ್ಗಿ ತಡೆಯುತ್ತೇವೆ. ಇವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಈ ಹುಚ್ಚು ಆಚರಣೆಯನ್ನು ತಡೆಹಿಡಿಯಬೇಕು ಎಂದು ಸುನೀಲ್​ ಕೆ.ಆರ್​. ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಎಚ್​ಪಿ ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಬಜರಂಗದಳ ಜಿಲ್ಲಾ ಸಂಯೋಜಕ ಚೇತನ್​ ಪೇರಲ್ಕ, ವಿಎಚ್​ಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಪಾಲಡ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net