ಹಿಂದುತ್ವದ ನೆಲೆಯಲ್ಲಿ ಭಾರತದ ಮುನ್ನಡೆ -ಪಿ.ಎಸ್. ಪ್ರಕಾಶ್

hhhhhhh
Published on



ಮಂಗಳೂರು : ಹಿಂದುತ್ವದ ನೆಲೆಯಲ್ಲಿ ಭಾರತ ಮುನ್ನಡೆಯುತ್ತಿದೆ. ಹಿಂದು ರಾಷ್ಟ್ರದ ಪ್ರಖರ ಕಿರಣ ಪ್ರಕಾಶಮಾನವಾಗಿ ಬೆಳಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದೇ ವೇಳೆ ಸಮಾಜಕ್ಕೆ ಹಿಂದು ಸಮಾಜಕ್ಕೆ ಕಂಟಕವಾಗಿರುವ ಮತಾಂತರ, ಲವ್‌ಜಿಹಾದ್, ಗೋಹತ್ಯೆಗೆ ಸೂಕ್ತ ಉತ್ತರ ನೀಡಲು ಹಿಂದುಗಳನ್ನು ಜಾಗೃತಿಗೊಳಿಸುವ ಕಾರ್ಯವೂ ನಡೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯವಾಹ ಪಿ.ಎಸ್. ಪ್ರಕಾಶ್ ಹೇಳಿದರು.
ವಿಶ್ವ ಹಿಂದು ಪರಿಷತ್‌ಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬಜರಂಗದಳ ಹಮ್ಮಿಕೊಂಡಿರುವ ಶೌರ್ಯ ಜಾಗರಣ
ರಥಯಾತ್ರೆ ಅಂಗವಾಗಿ ಅ. 9ಕ್ಕೆ ಮಂಗಳೂರಿನಲ್ಲಿ ನಡೆಯಲಿರುವ ಬೃಹತ್ ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಭೆ
ಹಿನ್ನೆಲೆಯಲ್ಲಿ ಪ್ರಚಾರ ರಥಕ್ಕೆ ಬುಧವಾರ ನಗರದ ಬಂಟ್ಸ್ ಹಾಸ್ಟೆಲ್‌ನ ಕಾರ್ಯಾಲಯ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದುಗಳನ್ನು ತುಳಿದು ಮೇಲಕ್ಕೆ ಬರುವುದು ಯಾರಿಗೂ ಸಾಧ್ಯವಿಲ್ಲ. ಹಿಂದು ಸಮಾಜವನ್ನು ಕೆಣಕುವ ಪ್ರಯತ್ನಕ್ಕೆ ಉತ್ತರ
ನೀಡುವ ಶಕ್ತಿ ಭಾರತಕ್ಕಿದೆ. ಹಿಂದುತ್ವದ ಜಾಗೃತಿಗಾಗಿ ರಥಯಾತ್ರೆ ಆಯೋಜಿಸಲಾಗಿದೆ ಎಂದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಹಿಂದುಗಳದ್ದು ಶೌರ್ಯದ ಇತಿಹಾಸ ಎನ್ನುವುದನ್ನು ಸಮಾಜಕ್ಕೆ ಸಾರಲು ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಹಿಂದುಗಳ ಪರವಾಗಿ ಮಾತನಾಡಿದರೆ ಕೋಮುವಾದ ಎನ್ನಲಾಗುತ್ತಿದೆ. ಹಿಂದು ವಿರೋಧಿ ಹೇಳಿಕೆ ನೀಡುವವರಿಗೆ ಸನ್ಮಾನ ಮಾಡಲಾಗುತ್ತಿದೆ. ಈ ವೈರುಧ್ಯದ ನಡುವೆ ಹಿಂದುತ್ವದ ಜಾಗೃತಿ ಅವಶ್ಯವಾಗಿದೆ ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಮಾತನಾಡಿ, ಅ.9ರಂದು ಮಧ್ಯಾಹ್ನ 2.30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಡಾ.ಪ್ರಭಾಕರ ಭಟ್ ಕಲ್ಕಡ್ಕ ಶೋಭಾ ಯಾತ್ರೆ ಉದ್ಘಾಟಿಸಲಿದ್ದಾರೆ. ಬಳಿಕ ಕದ್ರಿ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಹಿಂಪ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ, ಕಾರ್ಯದರ್ಶಿ ಭುಜಂಗ ಕುಲಾಲ್ ಉಪಸ್ಥಿತರಿದ್ದರು. ರವಿ ಅಸೈಗೋಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಚಾರ ರಥಯಾತ್ರೆ ಮಂಗಳೂರು ನಗರ, ಉಳ್ಳಾಲ, ಮೂಲ್ಕಿ, ಮೂಡುಬಿದಿರೆ, ಸುರತ್ಕಲ್, ಗುರುಪುರ ಭಾಗಗಳಲ್ಲಿ ಸಂಚರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net