

ಬೆಳಗಾವಿ : ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನಾ ರ‌್ಯಾಲಿ ನಡೆಯಿಸಿ, ಸಮಗ್ರ ತನಿಖೆಗೆ ಒತ್ತಾಯಿಸಿದರು.
ಹಣಕಾಸಿನ ವಿಚಾರಕ್ಕೆ ಮುನಿಗಳ ಹತ್ಯೆಯಾಗಿದೆ ಎಂಬ ಸಂಗತಿ ಒಪ್ಪಲು ಸಾಧ್ಯವಿಲ್ಲ. ಹಣಕಾಸಿನ ವ್ಯವಹಾರವಾಗಿದ್ದರೆ ಈ ರೀತಿ ಅಪಹರಿಸಲು, ಬರ್ಬರವಾಗಿ ತುಂಡರಿಸಲು ಸಾಧ್ಯವೇ..? ನಿಜವಾದ ಅಪರಾಧಿಯನ್ನು ಕಾಪಾಡುವ ಷಡ್ಯಂತ್ರ ನಡೆದಿದ್ದು, ಹಾಗಾಗಿ ಸಿಬಿಐ ಮೂಲಕ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಉತ್ತರಕರ್ನಾಟಕ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಖಂಡನೀಯ. ಸಮಗ್ರ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಬೇಕು. ಹಣಕಾಸಿನ ವಿಚಾರದಲ್ಲಿ ಮುನಿಗಳ ಹತ್ಯೆ ಆಗಲು ಸಾಧ್ಯವೇ ಇಲ್ಲ. ನಿರ್ವಾಣ ಮುನಿಗಳು ಕೈಯಲ್ಲಿ ದುಡ್ಡು ಹಿಡಿಯುವುದೇ ಇಲ್ಲ. ಇದು ವೈಚಾರಿಕ ಹತ್ಯೆಯಾಗಿದ್ದು, ವಿದೇಶಿ ಕುತಂತ್ರದ ಸಂಶಯ ಮೂಡಿದೆ. ಜಿಹಾದಿಗಳು ಯಾವ ರೀತಿ ಆಶ್ರಮಕ್ಕೆ ಬರುತ್ತಾರೆ ಗೊತ್ತಾಗಲ್ಲ. ಚಾಲಕರಾಗಿ, ಸೇವಕರಾಗಿಯೂ ಬರುವ ಸಾಧ್ಯತೆಯಿದೆ. ಹಾಗಾಗಿ ತನಿಖೆ ಅಡ್ಡದಾರಿ ಹಿಡಿಯಬಾರದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.