ರಾಜ್ಯ ಸರ್ಕಾರದಿಂದ ಓಲೈಕೆಯ ರಾಜಕಾರಣ ಪ್ರತಿಭಟನಾ ಸಭೆಯಲ್ಲಿ ವಿಎಚ್‌ಪಿ ಮುಖಂಡ ಜಗದೀಶ ಶೇಣವ ಹೇಳಿಕೆ

mng-may31-vhp protest
Published on

ಮಂಗಳೂರು: ರಾಜ್ಯ ಸರ್ಕಾರ ಮುಸ್ಲಿಂ ಓಲೈಕೆಯ ರಾಜಕಾರಣ ಮಾಡುತ್ತಿದೆ. ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪುವೆಲ್ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಬೇಕು ಎಂದು ವಿಎಚ್‌ಪಿ ಮುಖಂಡರ ಜಗದೀಶ್ ಶೇಣವ ಒತ್ತಾಯಿಸಿದರು.


ರಸ್ತೆಯಲ್ಲಿ ನಮಾಜ್ ಮಾಡಿರುವುದನ್ನು ಪ್ರಶ್ನಿಸಿದ ಶರಣ್ ಪಂಪುವೆಲ್ ಅವರ ಮೇಲೆ ಕೇಸು ದಾಖಲಿಸಿರುವುದು, ನಮಾಜ್ ಮಾಡಿದವರ ಮೇಲೆ ಹಾಕಿದ ಕೇಸಿಗೆ ‘ಬಿ’ ರಿಪೋರ್ಟ್ ಹಾಕಿದ ಸರ್ಕಾರದ ನಡೆಯನ್ನು ಖಂಡಿಸಿ ಶುಕ್ರವಾರ ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ‘ಬಿ’ ರಿಪೋರ್ಟ್ ಹಾಕುವುದು, ಬೆಳ್ತಂಗಡಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿ ಎರಡೇ ದಿನದಲ್ಲಿ ಚಾರ್ಜ್‌ಶೀಟ್ ಹಾಕುವುದು ರಾಷ್ಟ್ರದಲ್ಲೇ ನಮ್ಮ ಜಿಲ್ಲೆಯಲ್ಲಿ ಮೊದಲು. ಇಲ್ಲಿ ನ್ಯಾಯ ಕೇಳಿದವರಿಗೆ ಶಿಕ್ಷೆ, ತಪ್ಪು ಮಾಡಿದವರಿಗೆ ರಾಜ ಮರ್ಯಾದಿ ಸಿಗುವುದು ವಿಪರ‌್ಯಾಸ ಎಂದರು.


ಹಿಂದೂ ಸಮಾಜ ಒಟ್ಟಾಗಿದೆ. ಪೊಲೀಸ್ ಆಯುಕ್ತರು ಹಿಂದೂ ಸಂಘಟನೆಯ ಇತಿಹಾಸವನ್ನು ಅರಿತುಕೊಳ್ಳಬೇಕು. ಶರಣ್ ಪಂಪುವೆಲ್ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ‘ಬಿ’ ರಿಪೋರ್ಟ್ ಸಲ್ಲಿಸಬೇಕು ಎಂದವರು ಒತ್ತಾಯಿಸಿದರು. ತಪ್ಪಿದಲ್ಲಿ ಹಿಂದೂ ಸಮಾಜ ಸೂಕ್ತ ರೀತಿಯಲ್ಲಿ ಉತ್ತರ ನೀಡಲು ಸಿದ್ಧವಿದೆ ಎಂದವರು ಎಚ್ಚರಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಪೊಳಲಿ ಗಿರಿಪ್ರಕಾಶ್ ತಂತ್ರಿ, ಹಿಂದೂ ಸಂಘಟನೆ ಮುಖಂಡರಾದ ಶಿವಾನಂದ ಮೆಂಡನ್, ಪುನೀತ್ ಅತ್ತಾವರ, ರವಿ ಅಸೈಗೊಳಿ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net