

ಹುಬ್ಬಳ್ಳಿ: ಕೋಟ್ಯಂತರ ಹಿಂದುಗಳ ಆರಾಧ್ಯದೈವ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ತನಿಖೆ ನೆಪದಲ್ಲಿ ಅವಹೇಳನಕಾರಿಯಾಗಿ ನಡೆದುಕೊಳ್ಳಲಾಗುತ್ತಿದೆ. ಎಸ್ಐಟಿ ತನಿಖೆಗೆ ಯಾವುದೇ ವಿರೋಧವಿಲ್ಲ. ಆದರೆ, ಧರ್ಮದ ವಿರುದ್ಧ ಷಡ್ಯಂತ್ರ ನಡೆಸಿದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಧಾರ್ಮಿಕ ಪ್ರಮುಖ ಬಸವರಾಜ ಜಿ. ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆ ನೆಪ ಮಾಡಿಕೊಂಡು ಹಿಂದೂಗಳ ಶ್ರದ್ಧಾ ಕೇಂದ್ರಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧಾರ್ಮಿಕ ಸ್ಥಳಗಳಿಗೆ ಭಂಗ ತರುವುದನ್ನು ಸಹಿಸುವುದಿಲ್ಲ, ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಈ ಹುನ್ನಾರದ ಹಿಂದಿರುವ ಕುತಂತ್ರಿಗಳು ಯಾರು ಎಂಬುದನ್ನು ಸರ್ಕಾರ ಪತ್ತೆ ಹಚ್ಚಲು ತನಿಖೆ ಮಾಡಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ವಿ ಎಚ್ ಪಿ ಮಂದಿರ, ಅರ್ಚಕ, ಪುರೋಹಿತರ ವಿಭಾಗದ ಪ್ರಮುಖ ಪ್ರದೀಪ ಕೆ. ಶೆಟ್ಟಿ ಮಾತನಾಡಿ, ಧರ್ಮಸ್ಥಳ ಸೇರಿ ದಕ್ಷಿಣ ಕನ್ನಡದ ಬಗ್ಗೆ ಗೊತ್ತಿರದ ಕೆಲವರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಈ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದೆ. ಹಿಂದೂ ವಿರೋಧಿಯಂತೆ ನಡೆದುಕೊಳ್ಳುತ್ತಿದೆ. ಮಠ ಮಂದಿರಗಳಿಗೆ ತೊಂದರೆ ನೀಡಿದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಯುತ್ತಿರುವ ಹುನ್ನಾರದ ವಿರುದ್ಧ ಎಲ್ಲ ಹಿಂದೂಪರ ಸಂಘಟನೆಗಳ ಸಭೆ ನಡೆಸಿ ಉಗ್ರ ಹೋರಾಟದ ಬಗ್ಗೆ ಇನ್ನೆರಡು ದಿನದಲ್ಲಿ ನಿರ್ಧರಿಸಲಾಗುವುದು ಎಂದರು.
ವಿ ಎಚ್ ಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಗಣಪತಿ ಸ್ವಾದಿ ಇದ್ದರು.