

ವಿಜಯವಾಣಿ ಸುದ್ದಿಜಾಲ ಮಂಗಳೂರು
ಬಾಂಗ್ಲಾದೇಶದಲ್ಲಿ ಬಂಧಿಸಲ್ಪಟ್ಟ ಹಿಂದು ಸನ್ಯಾಸಿ ಚಿನ್ಮಯ್ ಕೃಷ್ಣದಾಸ್ ಪ್ರಭು ಅವರ ಬಿಡುಗಡೆ ಮತ್ತು ಹಿಂದುಗಳ ರಕ್ಷಣೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಮಂಗಳೂರು ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಇಸ್ಕಾನ್ ಶಾಂತಿ, ಸೌಹಾರ್ದ, ಮಾನವೀಯತೆ ಪ್ರತಿಪಾದಿಸಿ, ವಿಶ್ವಶಾಂತಿ ಬೋಧಿಸಿದ ಸಂಸ್ಥೆ. ಬಾಂಗ್ಲಾದೇಶಿಯರಿಗೆ ಸಹಾಯ ಮಾಡಿದ ಇಸ್ಕಾನ್‌ನ ಸಂತರನ್ನು ಬಂಧಿಸಿರುವುದು ಖಂಡನೀಯ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಂತರು, ಸಮಸ್ತ ಭಾರತೀಯರು ಒಟ್ಟಾಗಿದ್ದೇವೆ ಎಂದರು.
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಘಟನೆಯಿಂದ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು. ಹಿಂದುಗಳ ಮೇಲೆ ದೌರ್ಜನ್ಯ ನಿಲ್ಲದಿದ್ದರೆ ಭಾರತದಲ್ಲಿರುವ ಬಾಂಗ್ಲಾದೇಶಿಯರಿಗೆ ಕಷ್ಟದ ದಿನ ಎದುರಾಗಲಿದೆ. ದೇಶದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಿಂದುಗಳಿಗೆ ಯಾವುದೇ ಸ್ಥಳದಲ್ಲಿ ತೊಂದರೆಯಾಗಬಾರದು ಎಂದು ಎಲ್ಲ ದೇವಸ್ಥಾನ, ಮಠ, ಭಜನಾ ಮಂದಿರಗಳಲ್ಲಿ ಪೂಜೆ ವೇಳೆ ಪ್ರಾರ್ಥನೆ ನಡೆಸಬೇಕು ಎಂದರು.
ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿದರು. ಇಸ್ಕಾನ್ ಕುಳಾಯಿಯ ಸಚ್ಚಿದಾನಂದ ಅದ್ವೈತ ದಾಸ, ಮಂಗಳೂರು ಓಂಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಶಿವ ಜ್ಞಾನಮಹಿ ಸರಸ್ವತಿ, ಕುಡುಪು ಕಟ್ಟೆ ಇಸ್ಕಾನ್‌ನ ಪ್ರೇಮಭಕ್ತಿ ಪ್ರಭು, ವಿಹಿಂಪ ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಮಂಗಳೂರು ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಹಿಂಪ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಪುತ್ತೂರು ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಭುಜಂಗ ಕುಲಾಲ್, ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಪ್ರಮುಖರಾದ ಪೊಳಲಿ ಗಿರಿಪ್ರಕಾಶ ತಂತ್ರಿ, ಪ್ರೇಮಾನಂದ ಶೆಟ್ಟಿ, ಗಣೇಶ್ ಪೊದುವಾಳ್, ಶಕೀಲಾ ಕಾವ ಭಾಗವಹಿಸಿದ್ದರು.
------
ಪಾಕಿಸ್ತಾನದಿಂದ ಸ್ವತಂತ್ರ ಬಾಂಗ್ಲಾದೇಶ ರಚನೆಗೆ ಭಾರತ ಸರ್ಕಾರ ಪ್ರಮುಖ ಕಾರಣವಾಗಿದೆ. ಭಾರತೀಯ ಸೈನಿಕರು ಯಾವುದೇ ಪ್ರಾಣಹಾನಿ ಮಾಡದೆ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದರು. ಆ ಸಂದರ್ಭ ಶೇ.37ರಷ್ಟಿದ್ದ ಹಿಂದುಗಳ ಸಂಖ್ಯೆ ಶೇ.7.5ಕ್ಕೆ ಇಳಿದಿದೆ. ಇಂದು ಅದೇ ಬಾಂಗ್ಲಾದೇಶ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ. ಇದು ಅತ್ಯಂತ ಅಮಾನವೀಯ. ಬಾಂಗ್ಲಾದಲ್ಲಿ ಹಿಂದುಗಳಿಗೆ ಬದುಕಲು ಸಮಾನ ಅವಕಾಶ ನೀಡಬೇಕು.
ಪ್ರೊ.ಎಂ.ಬಿ.ಪುರಾಣಿಕ್, ಕಾರ್ಯಾಧ್ಯಕ್ಷ, ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ