ವಿಹಿಂಪ ವಿಶ್ವದ ಹಿಂದುಗಳ ಧ್ವನಿ: ಶರತ್ ಕೃಷ್ಣ ಪಡುವೆಟ್ನಾಯ ಪ್ರತಿಪಾದನೆ

Bel_VHP
Published on

ಬೆಳ್ತಂಗಡಿ: ತ್ಯಾಗ, ಬಲಿದಾನ, ಪ್ರತಿಭಟನೆ, ಹೋರಾಟಗಳ ಮೂಲಕ ಬೆಳೆದ ವಿಶ್ವ ಹಿಂದು ಪರಿಷತ್ ವಿಶ್ವದ ಹಿಂದುಗಳ ಧ್ವನಿ ಹಾಗೂ ಪ್ರತಿನಿಧಿಯಾಗಿದೆ. ಹಿರಿಯರ ಶ್ರಮದ ಫಲ ಸಂಘಟನೆಯ ಬೆಳವಣಿಗೆಗೆ ಕಾರಣ. ಇದನ್ನು ತಿಳಿದು ಶಕ್ತಿ, ಸಾಮರ್ಥ್ಯ ಇನ್ನಷ್ಟು ಬಲಗೊಂಡಲ್ಲಿ ರಾಷ್ಟ್ರವು ಬಲಿಷ್ಠವಾಗುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.

ಭಾನುವಾರ ವಿಹಿಂಪ ಬೆಳ್ತಂಗಡಿ ಪ್ರಖಂಡ ವತಿಯಿಂದ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮ, ಬೃಹತ್ ಹಿಂದು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ವಿಹಿಂಪ ಮಂಗಳೂರು ವಿಭಾಗದ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು. ಉತ್ಸವ ಸಮಿತಿಯ ಅಧ್ಯಕ್ಷ ಡಾ.ಎಂ.ಎ.ದಯಾಕರ ಕಾರ್ಯಕ್ರಮ ಉದ್ಘಾಟಿಸಿದರು. ವಿಹಿಂಪ ಪುತ್ತೂರು ಜಿಲ್ಲೆಯ ಕಾರ್ಯದರ್ಶಿ ನವೀನ್ ನೆರಿಯ, ಡಾ.ಭಾರತಿ ಜಿ.ಕೆ, ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಪ್ರತಾಪ ಸಿಂಹ ನಾಯಕ್, ಸಮಾಜದ ಸಂಘಟನೆಗಳ ಮುಖ್ಯಸ್ಥರು, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಆಡಳಿತ ನಿರ್ದೇಶಕ ಸುಮಂತ್ ಕುಮಾರ್ ಜೈನ್, ಉದ್ಯಮಿ ನಾರಾಯಣ ಗೌಡ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು.

60 ಮಂದಿ ಹಿರಿಯರನ್ನು ಗೌರವಿಸಲಾಯಿತು. ದಿನೇಶ್ ಚಾರ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ್ ಸುವರ್ಣ ಸ್ವಾಗತಿಸಿದರು. ಮೋಹನ್ ಬೆಳ್ತಂಗಡಿ ವಂದಿಸಿದರು. ಎಸ್‌ಡಿಎಂ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ, ಸಂಘ ಚಾಲಕ ಗಣೇಶ್ ಭಟ್ ಕಾಂತಾಜೆ, ಉದ್ಯಮಿ ದಯಾಕರ ಉಪಸ್ಥಿತರಿದ್ದರು.

ಜಾತಿ ವಿಚಾರದಲ್ಲಿ ವಿಂಗಡಣೆ ಬೇಡ

ವಿಹಿಂಪ ಮಂಗಳೂರು ವಿಭಾಗದ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ರಾಜಕೀಯ, ಸಾಮಾಜಿಕ ದಾಳಿಯನ್ನು ಮೆಟ್ಟಿ ನಿಂತ ನಮ್ಮ ಹಿರಿಯರು ಹಿಂದು ಸಮಾಜ ಕಟ್ಟಿದರು. ಸಮಾಜದ ಆಂತರಿಕ ಸವಾಲುಗಳ ವಿರುದ್ಧ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿದೆ. ಇತಿಹಾಸಕ್ಕೆ ತಾರ್ಕಿಕ ನ್ಯಾಯ ಸಿಕ್ಕಿದೆ. ಕಾರ್ಯಕರ್ತರ ಫಲದಿಂದ ಸಮಾಜ ಸಶಕ್ತವಾಗಿದ್ದರೂ ಇನ್ನಷ್ಟು ಮೈ ಕೊಡವಿ ಎದ್ದು ನಿಲ್ಲಬೇಕು. ಜಾತಿ ವಿಚಾರದಲ್ಲಿ ಹಿಂದು ಸಮಾಜ ವಿಂಗಡಣೆಯಾಗಬಾರದು ಎಂದರು.

ಭವ್ಯ ಶೋಭಾಯಾತ್ರೆ, ಭಜನೆ

ಕಾರ್ಯಕ್ರಮಕ್ಕೆ ಮೊದಲು ಉಜಿರೆಯ ರತ್ನರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಶೋಭಾಯಾತ್ರೆಯು 60 ಭಜನೆ ತಂಡ, 60 ಬೈಕ್ ರ್‍ಯಾಲಿಯಲ್ಲಿ ವಿಹಿಂಪ ಸಾಧನೆಯ ಸವಿನೆನಪುಗಳ ಪ್ರದರ್ಶನ, ಕೃಷ್ಣವೇಷ, ಕೀಲು ಕುದುರೆ ಇತ್ಯಾದಿ ವೇಷಭೂಷಣಗಳೊಂದಿಗೆ ಉಜಿರೆ ಪೇಟೆ ಮೂಲಕ ಆಗಮಿಸಿತು. ಸಂಘದ ಹಿರಿಯ ಶೇಷಗಿರಿ ಶೆಣೈ ಶೋಭಾಯಾತ್ರೆಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net