ಗೋವುಗಳ ರಕ್ಷಣೆ ಸಮಾಜದ ಹೊಣೆ -ಶ್ರೀ ರಾಜಶೇಖರಾನಂದ ಸ್ವಾಮೀಜಿ

mng-16dec-vhp
Published on



ಮಂಗಳೂರು : ಗೋ ಸೇವೆಯಿಂದ ಪುಣ್ಯ ಗಳಿಸಬಹುದು ಎಂಬುದಕ್ಕೆ ಪುರಾಣದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಈಗ ದೇಸಿ ಗೋವುಗಳ ಸಂತತಿ ಅಳಿವಿನ ಅಂಚಿನಲ್ಲಿದ್ದು, ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಸಮಾಜದ ಮೇಲಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ವಿಶ್ವಹಿಂದು ಪರಿಷತ್‌ನ ಗೋವನಿತಾಶ್ರಯ ಟ್ರಸ್ಟ್ ಹಾಗೂ ಗೋವರ್ಧನ ಪೂಜಾ ಸಮಿತಿ ವತಿಯಿಂದ ನಗರದ ಕದ್ರಿ ಮೈದಾನದಲ್ಲಿ
ಶನಿವಾರ ಆರಂಭವಾದ ಗೋವರ್ಧನ ಪೂಜೆ ಹಾಗೂ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಗೋವಿನ ಸೇವೆ ಮಾಡುವುದರಿಂದ ನಮ್ಮ ಪಾಪಗಳು ನಾಶಹೊಂದಿ, ಪುಣ್ಯ ಪ್ರಾಪ್ತಿ ಆಗಲಿದೆ. ಪಜೀರು ಬೀಜಗುರಿಯ ಗೋಶಾಲೆಗೆ ನೆರವು ನೀಡುವ ಮೂಲಕ ಪುಣ್ಯ ಗಳಿಸುವ ಅವಕಾಶ ನಮ್ಮ ಮುಂದಿದೆ. ಅದನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗೋವನಿತಾಶ್ರಯ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಮಾತನಾಡಿ ಗೋವುಗಳ ರಕ್ಷಣೆಗಾಗಿ ಗೋವನಿತಾಶ್ರಯ ಟ್ರಸ್ಟ್ ಮೂಲಕ ಪಜೀರಿನಲ್ಲಿ ಗೋಶಾಲೆ ತೆರೆಯಲಾಗಿದೆ. ಅಕ್ರಮ ಸಾಗಾಟ ವೇಳೆ ರಕ್ಷಣೆಯಾಗುವ ದನ ಕರುಗಳನ್ನು ಪೊಲೀಸರು ಪಜೀರಿನ ಗೋಶಾಲೆಗೆ ಕಳುಹಿಸುತ್ತಾರೆ. ಪ್ರಸ್ತುತ ಅಲ್ಲಿ 400ಕ್ಕೂ ಅಧಿಕ ಗೋವುಗಳಿವೆ. ಒಂದು ಗೋವನ್ನು ಸಾಕಲು ವಾರ್ಷಿಕ 15 ಸಾವಿರ ರೂ. ಖರ್ಚು ಅಂದಾಜಿಸಲಾಗಿದ್ದು, ಗೋವುಗಳ ಪಾಲನೆಗೆ ಸಮಾಜದ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋವನಿತಾಶ್ರಯ ಟ್ರಸ್ಟ್‌ನ ಟ್ರಸ್ಟಿ ಡಾ.ಪಿ. ಅನಂತಕೃಷ್ಣ ಭಟ್, ಗೋವುಗಳನ್ನು ರಕ್ಷಿಸುವ ಬಜರಂಗದಳದ ಗೋರಕ್ಷಾ ಕಾರ್ಯಕರ್ತರ ಕೆಲಸ ಶ್ಲಾಘನೀಯ. ಇಂದಿನ ಮಕ್ಕಳಿಗೆ ಗೋವುಗಳನ್ನು ವೀಕ್ಷಿಸಲು, ಕರುಗಳ ಜತೆ ಆಟವಾಡಲು
ಗೋವರ್ಧನ ಪೂಜೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ವಿಹಿಂಪ ಮುಖಂಡ ಕೃಷ್ಣಮೂರ್ತಿ, ಬಾಲಂಭಟ್ ಮನೆತನದ ಗಿರಿಧರ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್‌ಕುಮಾರ್ ರೈ ಬೋಳಿಯಾರ್, ಮನಪಾ ಸದಸ್ಯೆ ಶಕೀಲಾ ಕಾವ, ಕಟ್ಟಡ ನಿರ್ಮಾಣ ಉದ್ಯಮಿಗಳಾದ ಲಕ್ಷ್ಮೀಶ ಭಂಡಾರಿ, ಕರುಣಾಕರ್, ಉದ್ಯಮಿ ರತ್ನಾಕರ ಜೈನ್, ಪ್ರಮುಖರಾದ ಶರವು ಗಣೇಶ ಭಟ್, ಪ್ರದೀಪ್ ಪಂಪ್‌ವೆಲ್ ಉಪಸ್ಥಿತರಿದ್ದರು.
ಶ್ರೀ ಗೋವರ್ಧನ ಪೂಜಾ ಸಮಿತಿ ಅಧ್ಯಕ್ಷ ಜಗದೀಶ ಕೆ.ಶೇಣವ ಸ್ವಾಗತಿಸಿ,ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ರವಿ ಅಸೈಗೋಳಿ ವಂದಿಸಿದರು. ಜಿಲ್ಲಾ ಪ್ರಚಾರ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net