ಎಸ್‌ಡಿಪಿಐ ವಿರುದ್ಧ ದೂರು ದಾಖಲಿಸಿದ ವಿಎಚ್‌ಪಿ

h31-badaskar
Published on

ಹುಬ್ಬಳ್ಳಿ: ‘ಬ್ರಿಟಿಷರ ವಿರುದ್ಧ ಸಮರ ಸಾರಿದ ಮುಸ್ಲಿಮರಿಗೆ ಜುಜುಬಿ ಸಂಘ ಪರಿವಾರ ಅದ್ಯಾವ ಲೆಕ್ಕ’, ‘ದೇಶವನ್ನು, ಮನಸ್ಸನ್ನು ಒಡೆದವರು ಮುಸ್ಲಿಮರ ಆಸ್ತಿಗೆ ಕಣ್ಣು ಹಾಕಿದ್ದಾರೆ’ ಹೀಗೆ ಹೀಗಳೆದು ಪೋಸ್ಟರ್ ಪ್ರದರ್ಶಿಸಿದ ಎಸ್‌ಡಿಪಿಐ ವಿರುದ್ದ ಇಲ್ಲಿಯ ಉಪನಗರ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಜರುಗಿದ ನಂತರ ಚನ್ನಮ್ಮ ವೃತ್ತದ ಬಳಿ ಎಸ್‌ಡಿಪಿಐನ ಅಬ್ದುಲ್‌ಗಫೂರ ಕುರಹಟ್ಟಿ ಹಾಗೂ ತನ್ನ ಕೆಲ ಕಾರ್ಯಕರ್ತರೊಂದಿಗೆ ಸೇರಿ ಬೇರೆ ಧರ್ಮದ, ಜನಾಂಗದವರ ಮೇಲೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡಿದ್ದಾರೆ. ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡುವ, ಶಾಂತಿ ಕದಡುವ, ಉದ್ದೇಶಪೂರ್ವಕವಾಗಿ ಹಿಂದು ಕೋಮಿನವರಿಗೆ ಉದ್ದೇಕಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸುವಂತೆ ಉಪನಗರ ಠಾಣೆಗೆ ವಿಶ್ವ ಹಿಂದು ಪರಿಷತ್‌ನ ನಗರ ಕಾರ್ಯದರ್ಶಿ ರಘು ಯಲ್ಲಕ್ಕನವರ ಅವರು ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ.

ಇದಕ್ಕೂ ಮೊದಲು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು, ಉಪನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಕೋಶಾಧ್ಯಕ್ಷ ಸಂಜೀವ ಬಡಸ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರ ನಜರಿನಲ್ಲಿಯೇ ದ್ವೇಷಪೂರಿತ ಪೋಸ್ಟರ್‌ಗಳ ಪ್ರದರ್ಶನ ನಡೆದಿದೆ. ಆದರೂ ಸ್ವಯಂ ದೂರು (ಸುಮೋಟೊ) ದಾಖಲಿಸಿಕೊಳ್ಳದೇ ಕಾಲಹರಣ ಮಾಡಿದೆ. ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅಸಮರ್ಥರಿದ್ದಾರೆ. ಕಾಂಗ್ರೆಸ್ ಸರ್ಕಾರ ಕೂಡಲೇ ಇವರನ್ನು ಹಿಂಪಡೆಯಬೇಕು. ಸಮರ್ಥರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ವಿವೇಕ ಮೊಕಾಶಿ, ಸುನೀಲ ಕಟ್ಟಿಮನಿ, ಗಂಗಾಧರ ಸಂಗಮಶೆಟ್ಟರ್, ರಮೇಶ ಕದಂ, ಅಶೋಕ ಅಣ್ವೇಕರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net