

ಮಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ, ವಿಎಚ್‌ಪಿ-ಬಜರಂಗದಳ ವತಿಯಿಂದ ಬುಧವಾರ ಮಂಗಳೂರಿನ ಕದ್ರಿ-ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ವಿಎಚ್‌ಪಿ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತಾನಾಡಿ, ನಮ್ಮ ತಾಳ್ಮೆಗೂ ಮಿತಿ ಇದೆ ಎನ್ನುವುದನ್ನು ಸರ್ಕಾರ, ಗೃಹ ಇಲಾಖೆ ನೆನಪಿಟ್ಟುಕೊಳ್ಳಬೇಕು. ಸಂಘಟನೆಯ ಯುವಕರು ತಾಳ್ಮೆ ಕಳೆದುಕೊಂಡರೆ, ಅದನ್ನು ತಡೆಯುವ ಶಕ್ತಿ ಸರ್ಕಾರಕ್ಕಾಗಲೀ, ಪೊಲೀಸ್ ಇಲಾಖೆಗಾಗಲೀ ಅಥವಾ ಸ್ವತಃ ಸಂಘಟನೆಯ ಹಿರಿಯರಿಗೂ ಇಲ್ಲ. ಹತ್ಯೆಗೆ ಕಾರಣರಾದವರನ್ನು ಈಗಾಗಲೇ ಬಂಧಿಸಲಾಗಿದ್ದು, ಅವರಿಗೆ ತಕ್ಕ ಶಿಕ್ಷೆ ನೀಡುವ ಜತೆಗೆ, ಇದರ ಹಿಂದೆ ಇರುವ ಸಂಘಟನೆಗಳನ್ನೂ ನಿಷೇಧಿಸುವ ಕೆಲಸವನ್ನೂ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ವಿಎಚ್‌ಪಿ ವಿಭಾಗ ಸಹಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ವಿಎಚ್‌ಪಿ ಜಿಲ್ಲಾಕಾರ್ಯದರ್ಶಿ ಶಿವಾನಂದ ಮೆಂಡನ್, ಸಂಸ್ಕಾರ ಭಾರತಿ ರಾಜ್ಯಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ದುರ್ಗಾವಾಹಿನಿ ಪ್ರಮುಖರಾದ ಸುಜಾತಾ ಕಂದಾವರಪದವು, ಶಾರದಮ್ಮ ಮೊದಲಾದವರಿದ್ದರು. ನೂರಾರು ಮಂದಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.