ವಿಹಿಂಪ, ಬಜರಂಗ ದಳ ಗಣೇಶನಿಗೆ ಅದ್ದೂರಿ ವಿದಾಯ

VHP, Bajrang Dal bid a grand farewell to Ganesh
Published on

ಹಿರೇಕೆರೂರ: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ತಾಲೂಕು ವಿಶ್ವ ಹಿಂದು ಪರಿಷತ್, ಬಜರಂಗ ದಳದವರು ಪ್ರತಿಷ್ಠಾಪಿಸಿದ್ದ 22ನೇ ವರ್ಷದ ಗಣೇಶನ ಮೂರ್ತಿಯ ವಿಸರ್ಜನೆ ಸೋಮವಾರ ಅತ್ಯಂತ ಅದ್ದೂರಿಯಾಗಿ, ಶಾಂತಿಯುತವಾಗಿ ನೆರವೇರಿತು.

ಸಂಜೆ 5 ಗಂಟೆಗೆ ಆರಂಭಗೊಂಡ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮಹಾರಾಷ್ಟ್ರದ ನಾಸಿಕ್ ಡೋಲ್ ಬಹು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಉಳಿದಂತೆ ಕನವಳ್ಳಿಯ ಗೊಂಬೆ ಕುಣಿತ, ಮಂಗಳೂರಿನ ಚಂಡೆ ವಾದ್ಯ, ಹಾನಗಲ್ಲಿನ ಬೇಡರ ವೇಷ ಸೇರಿದಂತೆ ಹಲವು ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆಯಲ್ಲಿ ಯುವಕರು ದೇಶ, ಹಿಂದು ಸಮಾಜ ಮತ್ತು ಗಣೇಶನ ಪರ ಜೈಘೊಷ ಹಾಕುತ್ತಾ ಸಾಗಿದರು. ಜ್ಯೋತಿ ಡಿಜೆ ಸೌಂಡ್ ಸಿಸ್ಟಮ್ ಸಂಗೀತಕ್ಕೆ ಯುವಕರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಕಲ್ಪಿಸಿದ್ದರಿಂದ ಮಹಿಳೆಯರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಚೌಡಿ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಶಾಂತಿಯುತವಾಗಿ ಶ್ರದ್ಧಾ ಭಕ್ತಿಯಿಂದ ಸಾಗಿತು. ರಾತ್ರಿ 10.30ಕ್ಕೆ ಪಟ್ಟಣದ ಹೊರವಲಯದಲ್ಲಿನ ಕುಬಸದ ಕಟ್ಟೆ ಕೆರೆಯಲ್ಲಿ ಗಣೇಶನನ್ನು ವಿಧಿ-ವಿಧಾನಗಳ ಮೂಲಕ ಶ್ರದ್ಧಾ ಭಕ್ತಿಯಿಂದ ವಿಸರ್ಜಿಸಲಾಯಿತು.

ಶಾಸಕ ಯು.ಬಿ. ಬಣಕಾರ ಅವರು ಗಣೇಶನಿಗೆ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರು. ನಂತರ ತಹಸೀಲ್ದಾರ್ ಕಚೇರಿ ಎದುರು ಧರ್ಮಸ್ಥಳದಿಂದ ಆಗಮಿಸಿದ ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾರಾಷ್ಟ್ರದ ನಾಸಿಕ್ ಡೋಲ್ ಭಾರಿಸಿ, ಸಂಗೀತ ವಾದ್ಯಕ್ಕೆ ನೃತ್ಯ ಮಾಡಿದರು.

ಬಜರಂಗ ದಳದ ಜಿಲ್ಲಾ ಸಂಚಾಲಕ ಅನಿಲ್ ಹಲವಾಗಿಲ, ವಿನಾಯಕ ಕರ್ನಲ್, ಸಂತೋಷ ಬೆಳಗುತ್ತಿ, ವಿನಾಯಕ ಯತ್ತಿನಹಳ್ಳಿ, ಅಕ್ಷಯ್ ಕಾಯಕದ, ನವೀನ್ ಕುರಬರ, ಬಸವರಾಜ ಓಲೇಕಾರ, ನಿಂಗಣ್ಣ ನಾಯ್ಕರ್, ಗುರುರಾಜ ಕರಡಿ, ಸತೀಶ ಬಾಳಿಕಾಯಿ, ಲೊಕೇಶ ಬೆಳಗುತ್ತಿ, ವಿನಾಯಕ ನೇಶ್ವಿ, ವರುಣ ಬೇತೂರ, ರಮೇಶ ಬಂಡಿವಡ್ಡರ, ಜಗದೀಶ ದೊಡ್ಡಗೌಡರ, ವಿಜಯಕುಮಾರ ಮುದಿಗೌಡ್ರ, ವೆಂಕಟೇಶ ಉಪ್ಪಾರ, ಮಂಜುನಾಥ ತಂಬಾಕದ, ಪ್ರವೀಣ ಮುಗಳಿಹಳ್ಳಿ, ಈರಣ್ಣ ಚಿಟ್ಟೂರ ಹಾಗೂ ಭಕ್ತರು ಇದ್ದರು.

ಡಿಜೆ ಬಳಸಿದ್ದಕ್ಕೆ ದೂರು: ಪೊಲೀಸ್ ಇಲಾಖೆ ನಿರ್ದೇಶನದಂತೆ ಮೊದಲೆ ಡಿಜೆ ಸೌಂಡ್ ಸಿಸ್ಟಮ್ ಬಳಕೆಗೆ ಅನುಮತಿ ಇರಲಿಲ್ಲ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಎರಡು ಮಿನಿ ಡಿಜೆ ಬಳಸಿದ್ದರಿಂದ ಸಂಘಟಕರು ಮತ್ತು ಡಿಜೆ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net