ಮತಾಂತರ, ಗೋಹತ್ಯೆ ವಿರುದ್ಧ ಸಂತರು ಧ್ವನಿ ಎತ್ತಬೇಕು: ರಾಜಶೇಖರಾನಂದ ಸ್ವಾಮೀಜಿ

udp-19-protest
Published on

ಉಡುಪಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಹಿಂದೂ ಸಮಾಜದ ದೃತಿಗೆಡಿಸಿ ಭಯದ ವಾತಾವರಣ ನಿರ್ಮಿಸಲು ಅಲ್ಪಸಂಖ್ಯಾತರನ್ನು ಓಲೈಸಲು ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆಯುವ ನಿರ್ಧಾರ ಮಾಡಿದೆ. ಇದರ ವಿರುದ್ಧ ರಾಜ್ಯದ ಎಲ್ಲಾ ಮಠಾಧೀಶರು ಧ್ವನಿ ಎತ್ತಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಸೋಮವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಆದಿಚುಂಚನಗಿರಿ ಶ್ರೀ, ಸುತ್ತೂರು ಶ್ರೀ, ಸಿದ್ದಗಂಗಾ ಶ್ರೀ, ಪೇಜಾವರ ಶ್ರೀಗಳು ಮನಸ್ಸು ಮಾಡಿದರೆ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಕೈಬಿಡುವಂತೆ ಒತ್ತಾಯಿಸಬಹುದು ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರ ಮಾಡಿದ ಸಿದ್ದರಾಮಯ್ಯಪಾದ್ರಿ ಮಜಾದೋ ಅವರನ್ನು ಭೇಟಿ ಮಾಡುತ್ತಾರೆ. ಇದರ ಅಜೆಂಡಾವನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಗ್ಯಾರೆಂಟಿ ಘೋಷಣೆಯಿಂದ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಸರ್ಕಾರವೇ ಮುಂದೆ ನಿಂತು ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಹಿಂದೂ ಸಂತರು ಮಾರ್ಗಕ್ಕೆ ಇಳಿಯುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಮತಾಂತರ ನಿಷೇಧ ಕಾಯ್ದೆ ಬಳಿಕ ಸಮಾಜದಲ್ಲಿ ಸಾಮಾರಸ್ಯ ನೆಲೆಸಿತ್ತು. ಈ ಸರ್ಕಾರ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಬಳಿಕ ರಾಜ್ಯಾದ್ಯಂತ 4-5 ಅಹಿತಕರ ಘಟನೆಗಳು ನಡೆದಿವೆ ಎಂದು ಶ್ರೀಗಳು ಹೇಳಿದರು.

ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಭಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಶಾಸಕ ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ರಘುಪತಿ ಭಟ್, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net