ಪಶು ವೈದ್ಯಕೀಯ ಪರೀಕ್ಷಕ ವಿರುದ್ಧ ಆಕ್ರೋಶ: ರಾಂಪುರ ಚಿಕಿತ್ಸಾಲಯದ ಮುಂದೆ ಕುರಿಗಾಹಿಗಳ ಪ್ರತಿಭಟನೆ

301121 Kotturu Rampura Kurigahi Protest
ಕೊಟ್ಟೂರು ತಾಲೂಕು ರಾಂಪುರ ಪ್ರಾಥಮಿಕ ಪಶು ಚಿಕಿತ್ಸಾಲಯದ ಮುಂದೆ ಸತ್ತ ಕುರಿಗಳೊಂದಿಗೆ ಕುರಿಗಾಹಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
Published on

ಕೊಟ್ಟೂರು: ಪಶು ವೈದ್ಯಕೀಯ ಪರೀಕ್ಷಕ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವೆಂದು ಆರೋಪಿಸಿ ಕುರಿಗಾಹಿಗಳು ಮಂಗಳವಾರ ಸತ್ತ ನಾಲ್ಕು ಕುರಿಗಳ ಸಮೇತ ರಾಂಪುರ ಪ್ರಾಥಮಿಕ ಪಶು ಚಿಕಿತ್ಸಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿನ ಪಶು ವೈದ್ಯಕೀಯ ಪರೀಕ್ಷಕ ಯೋಗೇಶ್ವರ ದಿನ್ನಿ, ಕುರಿ-ಮೇಕೆ ಹಾಗೂ ಇತರ ಪಶುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದಿಲ್ಲ. ಔಷಧ ಕೊಡುವುದಿಲ್ಲ. ಪ್ರತಿಯೊಂದಕ್ಕೂ ಹಣ ವಸೂಲಿ ಮಾಡುತ್ತಾರೆ. ಸರ್ಕಾರ ಪೂರೈಸಿದ ಔಷಧವನ್ನು ಕೊಟ್ಟೂರಿನ ಮನೆಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಾರೆ. ಅನಾರೋಗ್ಯಕ್ಕೀಡಾದ ಕುರಿ-ಮೇಕೆಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡದ ಕಾರಣ ಹಲವಾರು ಸತ್ತಿವೆ. ಪರಿಹಾರ ನೀಡಲು ಹಣದ ಬೇಡಿಕೆ ಇಡುತ್ತಿದ್ದು, ಕೂಡಲೇ ಯೋಗೇಶ್ವರರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೊಟ್ಟೂರು ಪಶು ವೈದ್ಯ ಆಸ್ಪತ್ರೆ ಸಹಾಯಕ ನಿರ್ದೇಶಕ ಕೊಟ್ರೇಶ ಮನವಿ ಆಲಿಸಿದರು. ಯೋಗೇಶ್ವರ ದಿನ್ನಿ ವಿರುದ್ಧ ತನಿಖೆ ಹಾಗೂ ವರ್ಗಾವಣೆಗೆ ಸಂಬಂಧಿಸಿ ಜಿಲ್ಲಾ ಪಶು ವೈದ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಕೊಟ್ಟೂರು ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಜ್ಜಿನಿ ರುದ್ರಪ್ಪ, ಸಂಘದ ನಿರ್ದೆಶಕರಾದ ಪನೋಸಪ್ಪರ ಮೂಗಪ್ಪ, ಚಿರಬಿ ಪೂಜಾರ್ ಕೊಟ್ರೇಶ, ಹೊಸಕೋಡಿಹಳ್ಳಿ ಭರಮಲಿಂಗಪ್ಪ, ಸುಟ್ಟಕೋಡಿಹಳ್ಳಿ ಅಣಜಿ ಕೊಟ್ರೇಶ, ರಾಂಪುರ ಉಮೇಶ, ಮುಖಂಡರಾದ ಬಸವರಾಜ್, ಭರಮಪ್ಪ, ಮಲ್ಲಪ್ಪ, ಕೊಟ್ರೇಶ, ವಿರೂಪಾಕ್ಷಿ, ಗೋಣೆಪ್ಪ, ಮಲ್ಲಿಕಾರ್ಜುನ, ಅಂಜಿನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net