

ಕಡಬ: ಕೊಯಿಲ ಪಶು ವೈದ್ಯಕೀಯ ಕಾಲೇಜು ಕಾಮಗಾರಿ ಮೇಲ್ನೋಟಕ್ಕೆ ಕಳಪೆಯಾಗಿರುವುದು ಕಂಡುಬಂದಿದ್ದು, ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದು ಹಾಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರಿಗೆ ಮನವಿ ಮಾಡುವುದಾಗಿ ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ರಾಮಕುಂಜ ಹೇಳಿದರು.
ಪಶು ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ, ಕಾಮಗಾರಿ ಮತ್ತು ಪರಿಸರ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ, ನೂರಾರು ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳ ದುಸ್ಥಿತಿ ತೀರಾ ಬೇಸರ ತರಿಸುವಂತಿದೆ, ಸರ್ಕಾರದ ಯೋಜನೆಯೊಂದು ಈ ರೀತಿಯಾಗಿರುವುದು ವ್ಯವಸ್ಥೆಯನ್ನು ಅಣುಕಿಸುವಂತಿದೆ ಎಂದರು.
ವಿಶೇಷ ಕರ್ತವ್ಯ ಅಧಿಕಾರಿ ಜತೆ ಮಾತನಾಡಿದ್ದು, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಕೆಲಸ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಮೂಲಸೌಕರ್ಯ ವ್ಯವಸ್ಥೆ ಆಗಬೇಕಾಗಿದ್ದು, ಅನುದಾನ ಬಿಡುಗಡೆ ಮಾಡುವ ಬಗ್ಗೆ ಇಲಾಖೆ ಸಚಿವರು ಮತ್ತು ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಮಾತನಾಡುವುದಾಗಿ ತಿಳಿಸಿದರು.
ರಾಮಕುಂಜ ಗ್ರಾಪಂ ಸದಸ್ಯ ಯತೀಶ್ ಬಾನಡ್ಕ, ಕೊಯಿಲ ಗ್ರಾಪಂ ಸದಸ್ಯ ನಜೀರ್ ಪೂರಿಂಗ, ಕೆಡಿಪಿ ಸದಸ್ಯ ಮೋನಪ್ಪ, ಕೊಯಿಲ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ, ಗ್ಯಾರಂಟಿ ಸಮಿತಿ ಸದಸ್ಯ ಎ.ಕೆ.ಬಶೀರ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿ.ಮಹಮ್ಮದ್ ರಫೀಕ್, ಎಸ್.ಅಬ್ದುಲ್ ರಹಿಮಾನ್, ಹೈದರ್ ಕಲಾಯಿ, ಯುವ ಕಾಂಗ್ರೆಸ್‌ನ ರಾಜಿಕ್ ಆತೂರು, ಕರುಣಾಕರ ರಾಮಕುಂಜ ಇದ್ದರು.
ಕಾಲೇಜು ಕ್ಯಾಂಪಸ್ ಒಳಗೆ ರಸ್ತೆ ಕಾಮಗಾರಿ ಹಾಗೂ ಕಟ್ಟಡಗಳಿಗೆ ಸಂಬಂಧಿಸಿದಂತೆ ವಿದ್ಯುತ್, ನೀರಿನ ಸಂಪರ್ಕ, ಪೀಠೋಪಕರಣ ವ್ಯವಸ್ಥೆ ಕೆಲಸಗಳು ನಡೆಯುತ್ತಿವೆ. ಒಳ ಮೀಸಲಾತಿ ನಿಯಮಾನುಸಾರ ಉಪನ್ಯಾಸಕರು ಮತ್ತು ಸಿಬ್ಬಂದಿ ನೇಮಕ ಬಗ್ಗೆ ಕಡತಗಳು ರಾಜ್ಯಪಾಲರ ಕಚೇರಿಯಲ್ಲಿವೆ. ಕೆಲವೊಂದು ಕಡೆ ಕಾಮಗಾರಿ ಕಳಪೆಯಾಗಿರುವುದರ ಬಗ್ಗೆ ತಿಳಿಸಲಾಗಿದ್ದು, ಕಾಮಗಾರಿ ನಿರ್ವಹಣೆ ಗುತ್ತಿಗೆ ಸಂಸ್ಥೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಡಾ.ಶಿವಕುಮಾರ್(ಡೀನ್), ವಿಶೇಷ ಕರ್ತವ್ಯ ಅಧಿಕಾರಿ, ಪಶು ವೈದ್ಯಕೀಯ ಕಾಲೇಜು ಕೊಯಿಲ