ಬೀಡಾಡಿ ಶ್ವಾನಗಳ ತಡೆಗೆ ಕೋಟ, ಪಶು ಆಸ್ಪತ್ರೆ ಮಾದರಿ ಕಾರ್ಯ

Santhanaharana chikithse
Published on

ಕೋಟ: ಕೋಟ ಪಶು ವೈದ್ಯಕೀಯ ಆಸ್ಪತ್ರೆ ಸಂಯೋಜನೆಯಲ್ಲಿ ಶ್ವಾನಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸಾ ಸತತ ಎರಡನೇ ವರ್ಷದ ಕಾರ್ಯಕ್ರಮ ಶುಕ್ರವಾರ ಕೋಟ ಪಶು ಆಸ್ಪತ್ರೆಯಲ್ಲಿ ಪ್ರಾರಂಭಗೊಂಡಿದೆ.

ಬೀದಿನಾಯಿಗಳ ತಡೆಗೆ ಕೋಟ ಗ್ರಾಪಂನ ಮುತುವರ್ಜಿಯ ಅನುದಾನದಡಿ ಈ ಕಾರ್ಯ ನಡೆಯುತ್ತಿದ್ದು, ಪಶುವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ಪುಣೆ ಮೂಲದ ಎನಿಮಲ್ ಪ್ರೊಟೆಕ್ಷನ್ ಆ್ಯಂಡ್ ವೆಲ್ಫೇರ್ ಸೊಸೈಟಿಯ ವೈದ್ಯಕೀಯ ನಿರ್ದೇಶಕ ವಿಜಯ ಕಾಂಬ್ಳೆ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.

ಬೆಳಗ್ಗೆ 6 ಗಂಟೆಯಿಂದ ಒಂದು ತಂಡ ಬೀದಿನಾಯಿಗಳನ್ನು ಹಿಡಿಯಲು ಪ್ರಾರಂಭಿಸುತ್ತದೆ. ಸಿಕ್ಕ ನಾಯಿಗಳನ್ನು ವಾಹನದ ಮೂಲಕ ಆಸ್ಪತ್ರೆಗೆ ಕರೆತಂದು ಕೋಣೆಯಲ್ಲಿ ಬಿಡುತ್ತಾರೆ. ನಂತರ ಅರಿವಳಿಕೆ ನೀಡಿ, ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಸಾಂಕ್ರಾಮಿಕ ರೋಗ ಹರಡದಂತೆಯೂ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ವೆಚ್ಚಕ್ಕಾಗಿ ಪಶುವೈದಕೀಯ ಇಲಾಖೆಗೆ ಉದ್ಯಮಿಗಳು ನೆರವಾಗುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆ ಸಂದರ್ಭ ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರಾದ ಚಂದ್ರ ಪೂಜಾರಿ ಕದ್ರಿಕಟ್ಟು, ಸಂತೋಷ್ ಪ್ರಭು, ಡೈಮೆಂಡ್ ಶೇಖರ್ ಗಿಳಿಯಾರು, ಮಾಜಿ ಸದಸ್ಯ ವಿಜಯ ಕುಂದರ್, ಸ್ಥಳೀಯರಾದ ಸಮತಾ ಸುರೇಶ್, ನಾಗೇಶ್ ಪೂಜಾರಿ, ಶಂಕರ್ ಸ್ಕಂದ, ಅಜಿತ್ ಶೆಟ್ಟಿ ಕೊತ್ತಾಡಿ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ವರ್ಷ ಕೋಟ, ಕೋಡಿ ಕನ್ಯಾಣ, ಕೋಟತಟ್ಟು, ವಡ್ಡರ್ಸೆ, ಪಾಂಡೇಶ್ವರ, ವಡ್ಡರ್ಸೆ ಗ್ರಾಪಂ ಭಾಗಗಳಲ್ಲಿ ಈ ಸಂತಾನಶಕ್ತಿ ಹರಣ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ಒಟ್ಟು 145 ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡಲಾಗಿತ್ತು.

ಅನುದಾನಕ್ಕೆ ಆಗ್ರಹ: ಬೀದಿನಾಯಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಪಶುವೈದ್ಯಕೀಯ ಆಸ್ಪತ್ರೆ ಕೈಗೊಂಡ ಈ ನಿರ್ಧಾರದಿಂದ ಹೆಚ್ಚಿನ ಭಾಗಗಳಲ್ಲಿ ಪ್ರಯೋಜನವಾಗಿದ್ದು, ಈ ನಿಟ್ಟಿನಲ್ಲಿ ಆಯಾ ಪಂಚಾಯಿತಿಗಳಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸಾ ವೆಚ್ಚಕ್ಕೆ ಹಣ ಕಾಯ್ದಿರಿಸುವಂತೆ ಪಶುವೈದ್ಯಕೀಯ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಆಗ್ರಹಿಸುತ್ತಿವೆ.

ಹುಚ್ಚುನಾಯಿಗಳ ಹಾವಳಿ, ಬೀದಿನಾಯಿಗಳ ಸಂಖ್ಯೆ ಕಡಿವಾಣಕ್ಕೆ ಸಂತಾನಶಕ್ತಿ ಹರಣ ಚಿಕಿತ್ಸಾ ಕಾರ್ಯಕ್ರಮಗಳು ಜಿಲ್ಲಾವಾರು ಅನುಷ್ಠಾನಗೊಳ್ಳಬೇಕು. ಪಂಚಾಯಿತಿ, ಪಟ್ಟಣ, ನಗರ ಪ್ರದೇಶಗಳ ಆಡಳಿತ ವ್ಯವಸ್ಥೆಗಳು ಹಣ ಕಾಯ್ದಿರಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಬಹುದು. ಡಾ.ಅರುಣ್ ಕುಮಾರ್ ಶೆಟ್ಟಿ ಕೋಟ ಪಶುವೈದಕೀಯ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net