

ಹೇಮನಾಥ ಪಡುಬಿದ್ರಿ
ಪಶು ಸಂಗೋಪನಾ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ನೇಮಕಕ್ಕೆ ಸರ್ಕಾರ ಮುಂದಾಗದ ಕಾರಣ ಕಾಪು ತಾಲೂಕಿನ ಪಶು ಆಸ್ಪತ್ರೆ, ಚಿಕಿತ್ಸಾಲಯಗಳಲ್ಲಿ ಕೇವಲ ಇಬ್ಬರು ಮಾತ್ರ ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಲೂಕಿನಲ್ಲಿ ಒಂದು ಪಶು ಆಸ್ಪತ್ರೆ, 4 ಪಶು ಚಿಕಿತ್ಸಾಲಯ, ಮೂರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ. ಇಲ್ಲಿ ಕೇವಲ 4 ಹುದ್ದೆಗಳಷ್ಟೇ ಭರ್ತಿಯಾಗಿವೆ. 29 ಹುದ್ದೆಗಳಿರುವ ಇಲಾಖೆಯಲ್ಲಿ 25 ಹುದ್ದೆಗಳು ಇನ್ನೂ ಖಾಲಿಯಾಗಿವೆ. ಅವುಗಳಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿ, ಪಶುವೈದ್ಯಕೀಯ ಪರೀಕ್ಷಕ, ಪಶುವೈದ್ಯಕೀಯ ಸಹಾಯಕರ ಹುದ್ದೆಗಳು ಹಾಗೂ ಡಿ ದರ್ಜೆ ನೌಕರರ ಸ್ಥಾನಗಳು ಇನ್ನೂ ಭರ್ತಿಯಾಗಿಲ್ಲ.
ತಾಲೂಕಿನಲ್ಲಿ 14,583 ಹಸುಗಳು, 31 ಎಮ್ಮೆ ಮತ್ತು ಕೋಣಗಳು, 534 ಕುರಿ ಮತ್ತು ಮೇಕೆಗಳು, 438 ಹಂದಿಗಳು, 12,426 ನಾಯಿಗಳು ಹಾಗೂ 2,74,816 ಕೋಳಿಗಳಿವೆ. 5 ಪಶುವೈದ್ಯಾಧಿಕಾರಿಗಳಿರಬೇಕಾದಲ್ಲಿ 2 ಮಂದಿಯಿದ್ದು, 3 ಹುದ್ದೆಗಳು ಖಾಲಿಯಿವೆ. ಓರ್ವ ಜಾನುವಾರು ಅಭಿವೃದ್ಧಿ ಅಧಿಕಾರಿ ಕಾರ್ಯನಿರ್ವಹಿಸಬೇಕಿದ್ದರೂ ಅ ಹುದ್ದೆ ಇನ್ನೂ ಭರ್ತಿಯಾಗಿಲ್ಲ. ಹಿರಿಯ ಪಶು ವೈದ್ಯಕೀಯ ಪರೀಕ್ಷಕ 2 ಹುದ್ದೆ ಭರ್ತಿಯಾಗಿದ್ದು, ಒಂದು ಖಾಲಿಯಿದೆ. 4 ಪಶುವೈದ್ಯಕೀಯ ಪರೀಕ್ಷಕರಿರಬೇಕಿದ್ದಲ್ಲಿ ಒಬ್ಬನೂ ಇಲ್ಲ, ಪಶುವೈದ್ಯಕೀಯ ಸಹಾಯಕ 3 ಹುದ್ದೆಗಳೂ ಖಾಲಿಯಿವೆ. ಡಿ ದರ್ಜೆ 13 ಹುದ್ದೆಗಳಲ್ಲಿ ಒಂದೂ ಭರ್ತಿಯಾಗಿಲ್ಲ. ಭರ್ತಿಯಾಗಿರುವ 4 ಹುದ್ದೆಗಳಲ್ಲಿ ಪಶುವೈದ್ಯಾಧಿಕಾರಿ ಮತ್ತು ಹಿರಿಯ ಪಶುವೈದ್ಯಕೀಯ ಪರೀಕ್ಷಕ ತಲಾ 2 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರೆ ಅವರೂ ಕೂಡ ಇತರೆಡೆ ಪ್ರಭಾರ ಹುದ್ದೆ ನಿರ್ವಹಿಸಬೇಕಾದ ಅನಿವಾರ್ಯತೆಯಿಂದ ಪೂರ್ಣ ಪ್ರಮಾಣದಲ್ಲಿ ಪಶು ಇಲಾಖೆ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಸರ್ಕಾರ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದರೂ ಇಲಾಖೆಯಲ್ಲಿ ಅಗತ್ಯವಿರುವ ಸಿಬ್ಬಂದಿ ಶೀಘ್ರ ನೇಮಕಕ್ಕೆ ಮುಂದಾಗದಿದ್ದಲ್ಲಿ ಜನ ಹೈನುಗಾರಿಕೆಯಿಂದ ವಿಮುಖರಾಗುವ ಪರಿಸ್ಥಿತಿ ಎದುರಾಗಲಿದೆ.
ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದು, ರಾಸುಗಳಿಗೆ ಏನಾದರೂ ತೊಂದರೆಯಾದಲ್ಲಿ ವೈದ್ಯಾಧಿಕಾರಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಪಲಿಮಾರಿನಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವಿದ್ದರೂ ಐದಾರು ವರ್ಷಗಳಿಂದ ವೈದ್ಯಾಧಿಕಾರಿ ಇಲ್ಲಿಲ್ಲ. ಬಳಿಕ ಓರ್ವ ಪಶುವೈದ್ಯ ನಿರೀಕ್ಷಕ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. 2 ವರ್ಷಗಳಿಂದ ಅವರು ಪಡುಬಿದ್ರಿ ಪಶು ಚಿಕಿತ್ಸಾ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರಿಂದ ಜನ ಕರೆದರಷ್ಟೇ ಪಲಿಮಾರಿಗೆ ಆಗಮಿಸುತ್ತಾರೆ. ಕಾಪು ಪ್ರಭಾರ ವೈದ್ಯಾಧಿಕಾರಿಯೇ ಇಲ್ಲಿನ ಹೊಣೆ ಹೊರುವಂತಾಗಿದೆ. ಕಳೆದ ಕೆಲ ತಿಂಗಳಿನಲ್ಲಿ ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ಐದಾರು ದನಗಳು ಅಸುನೀಗಿದ್ದು, ಹೈನುಗಾರರ ಆತಂಕಕ್ಕೂ ಕಾರಣವಾಗಿದೆ. ಗ್ರಾಮಕ್ಕೆ ಪೂರ್ಣ ಪ್ರಮಾಣದಲ್ಲಿ ವೈದ್ಯಾಧಿಕಾರಿ ನಿಯೋಜಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.
ಗಾಯತ್ರಿ ಡಿ ಪ್ರಭು, ಪಲಿಮಾರು ಗ್ರಾಪಂ ಅಧ್ಯಕ್ಷೆ
ಶಿರ್ವ, ಪಡುಬಿದ್ರಿ ಹಾಗೂ ಕಾಪು ಪಶು ಚಿಕಿತ್ಸಾಲಯದ ಹೊಣೆಗಾರಿಕೆಯೊಂದಿಗೆ ಮಜೂರು, ಪಡುಬಿದ್ರಿ, ಬೆಳಪು ಗ್ರಾಪಂಗಳ ನೋಡೆಲ್ ಅಧಿಕಾರಿಯಾಗಿ ಹೆಚ್ಚುವರಿಯಾಗಿ ನಿಭಾಯಿಸಬೇಕಾಗಿದೆ. ಸಚಿವರು ಹಾಗೂ ಮೇಲಾಧಿಕಾರಿಗಳ ಭೇಟಿ ಸೇರಿದಂತೆ ವಿವಿಧ ಸಭೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿದೆ. ಭಾಗವಹಿಸುವ ಅನಿವಾರ್ಯತೆ ನಿಭಾಯಿಸಬೇಕಾಗಿದೆ. ಈಗಾಗಲೇ ಕಾಪು ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಎರಡು ತಿಂಗಳ ಹಿಂದೆ ಪದೋನ್ನತಿ ಹೊಂದಿದ ಪರಿಣಾಮ ಅಲ್ಲಿನ ಜವಾಬ್ದಾರಿಯನ್ನೂ ನಿರ್ವಹಿಸಬೇಕಿದೆ.
ಡಾ. ಅರುಣ್ ಹೆಗ್ಡೆ, ವೈದ್ಯಾಧಿಕಾರಿ ಕಾಪು ಪಶು ಚಿಕಿತ್ಸಾಲಯ
ಖಾಲಿಯಿರುವ ಹುದ್ದೆಗಳ ನೇಮಕಕ್ಕೆ ಸರ್ಕಾರದ ಗಮನಕ್ಕೆ ತರಲಾಗುವುದು. ಕಾಪು ತಾಲೂಕಿನ ಕೆಲ ಚಿಕಿತ್ಸಾಲಯಗಳಲ್ಲಿ ವೈದ್ಯರು ಹಾಗೂ ಪರೀಕ್ಷಕರಿಗೆ ಹೆಚ್ಚುವರಿ ಹೊಣೆವಹಿಸಿ ಹೈನುಗಾರರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ.
ಲಾಲಾಜಿ ಆರ್. ಮೆಂಡನ್, ಕಾಪು ಶಾಸಕ