ಪಶು ಚಿಕಿತ್ಸಾ ಕೇಂದ್ರಕ್ಕೆ ಬೇಕು ಕಾಯಕಲ್ಪ: ಮುಂಡಾಜೆಯಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಸೇವೆ: ಹೈನುಗಾರರಿಗೆ ಸಂಕಷ್ಟ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮುಂಡಾಜೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಸೇವೆ ಕಳೆದ ಒಂದು ತಿಂಗಳಿನಿಂದ ವಾರದ ಮೂರು ದಿನಗಳಿಗೆ ಮಾತ್ರ ಸೀಮಿತಗೊಂಡಿದ್ದು, ಇದು ಈ ಕೇಂದ್ರದ ವ್ಯಾಪ್ತಿಯ ಹೈನುಗಾರರಿಗೆ ಸಮಸ್ಯೆ ತಂದೊಡ್ಡಿದೆ.

ಈ ಚಿಕಿತ್ಸಾ ಕೇಂದ್ರದ ವ್ಯಾಪ್ತಿಯ ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ ಈ ಮೂರು ಗ್ರಾಮಗಳಲ್ಲಿರುವ ಮೂರು ಸಾವಿರಕ್ಕಿಂತ ಹೆಚ್ಚಿನ ಜಾನುವಾರುಗಳಿಗೆ ಸೇವೆ ನೀಡಲು ಈ ಪಶು ಚಿಕಿತ್ಸಾ ಕೇಂದ್ರ ಮುಖ್ಯವಾಗಿದೆ. ಆದರೆ ಪ್ರಸ್ತುತ ವಾರದ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಮುಂಬಡ್ತಿ ಹೊಂದಿ ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದಾರೆ. ಉಳಿದಂತೆ ಇಲ್ಲಿ ಸಿಬ್ಬಂದಿ ಇರುವುದಿಲ್ಲ. ಈ ಕಾರಣದಿಂದ ಚಿಕಿತ್ಸಾ ಕೇಂದ್ರದ ಬೀಗ ತೆರೆಯುವವರು ಇಲ್ಲವಾಗಿದೆ.

ವರ್ಗಾವಣೆ ಹೊಂದಿರುವ ಹಿರಿಯ ಪಶು ವೈದ್ಯ ಪರೀಕ್ಷಕರನ್ನು ವಾರದ ಮೂರು ದಿನ ಇಲ್ಲಿಗೆ ನಿಯೋಜಿಸಲಾಗಿದೆ. ಜಾನುವಾರು ಅಧಿಕಾರಿಯಾಗಿ ಬಡ್ತಿ ಹೊಂದಿರುವ ಅವರು ವಾರದ ಮೂರು ದಿನ ಸೇವೆ ನೀಡುತ್ತಿದ್ದಾರೆ. ಪಶು ಚಿಕಿತ್ಸಾ ಕೇಂದ್ರದ ವ್ಯಾಪ್ತಿ 3 ಗ್ರಾಮಗಳಿಗೆ ಇರುವ ಕಾರಣ ವಾರದ ಮೂರು ದಿನಗಳಲ್ಲಿ ಸರಿಯಾದ ಸೇವೆ ನೀಡಲು ಸಮಯ ಸಾಕಾಗುತ್ತಿಲ್ಲ. ಇದು ಹೈನುಗಾರರಿಗೆ ಹೆಚ್ಚಿನ ಸಮಸ್ಯೆ ತಂದೊಡ್ಡಿದೆ.

ಮುಂಡಾಜೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಹೋಗುವ ರಸ್ತೆ ದುಸ್ಥಿತಿಯಲ್ಲಿರುವುದು.
ಮುಂಡಾಜೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಹೋಗುವ ರಸ್ತೆ ದುಸ್ಥಿತಿಯಲ್ಲಿರುವುದು.

ಎಲ್ಲ ಹುದ್ದೆ ಖಾಲಿ

ಈ ಕೇಂದ್ರಕ್ಕೆ ಹಿರಿಯ ಪಶು ವೈದ್ಯಕೀಯ ಪರೀಕ್ಷಕ, ಕಿರಿಯ ಪಶು ವೈದ್ಯಕೀಯ ಪರೀಕ್ಷಕ, ಡಿ ಗ್ರೂಪ್ ಹೀಗೆ ಒಟ್ಟು ಮೂರು ಹುದ್ದೆಗಳು ಮಂಜೂರಾಗಿದ್ದು ಸದ್ಯ ಎಲ್ಲವೂ ಖಾಲಿ ಬಿದ್ದಿವೆ. ಕೇಂದ್ರದ ಕಟ್ಟಡ ಉತ್ತಮ ಸ್ಥಿತಿಯಲ್ಲಿದೆ. ಆದರೆ ಇಲ್ಲಿ ಕನಿಷ್ಠ ಡಿ ಗ್ರೂಪ್ ಹುದ್ದೆ ಕೂಡ ಇಲ್ಲದ ಕಾರಣ ಬಾಗಿಲು ತೆರೆಯುವವರು ಇಲ್ಲದಂತಾಗಿದೆ. ಹೈನುಗಾರಿಕೆಗೆ ಸಾಕಷ್ಟು ಉತ್ತೇಜನವನ್ನು ನೀಡುವ ಸರ್ಕಾರ ಪಶು ವೈದ್ಯಕೀಯ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ ನೇಮಿಸದ ಕಾರಣ ಈ ಆಸ್ಪತ್ರೆಗಳು ಇದ್ದೂ ಇಲ್ಲದಂತಾಗಿದೆ. ಇಲಾಖೆ 20 ಶೇಕಡದಷ್ಟು ಮಾತ್ರ ಸಿಬ್ಬಂದಿಯನ್ನು ಹೊಂದಿದ್ದು, ಇರುವ ಒಬ್ಬೊಬ್ಬ ನೌಕರನಿಗೂ ನಾನಾ ಜವಾಬ್ದಾರಿ ನೀಡಲಾಗಿದೆ. ಇದು ಸಿಬ್ಬಂದಿಗಳ ಕೆಲಸದ ಒತ್ತಡ ಹೆಚ್ಚಿಸಿದೆ.

ಮುಂಡಾಜೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ.
ಮುಂಡಾಜೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ.

ಸಂಚಾರ ರಸ್ತೆಗೂ ದುಸ್ಥಿತಿ

ಈ ಪಶು ವೈದ್ಯಕೀಯ ಕೇಂದ್ರ ಮುಂಡಾಜೆಯ ಸೋಮಂತಡ್ಕದಿಂದ 300 ಮೀ. ದೂರದಲ್ಲಿದ್ದು ಇಲ್ಲಿಗೆ ಹೋಗಬೇಕಾದ ರಸ್ತೆಯಲ್ಲಿ ಜಾನುವಾರುಗಳು ನಡೆಯಲಾರದ ಸ್ಥಿತಿ ಇದೆ. ಅಲ್ಲಲ್ಲಿ ಹೊಂಡ, ದೊಡ್ಡ ಗಾತ್ರದ ಕಲ್ಲುಗಳು, ಭಾರಿ ಎತ್ತರದ ರಸ್ತೆಯಿದ್ದು ಇಲ್ಲಿ ವಾಹನ ಸವಾರಿ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ.

ಮುಂಡಾಜೆ ವಾಸು ಚಿಕಿತ್ಸಾ ಕೇಂದ್ರ ವ್ಯಾಪ್ತಿಯ ಹೈನುಗಾರರ ಅನುಕೂಲಕ್ಕೋಸ್ಕರ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ವಾರದ ಮೂರು ದಿನ ಮುಂಡಾಜೆ ಪಶು ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಸಿಬ್ಬಂದಿ ನೇಮಕಾತಿ ಸಮಯ ಇಲ್ಲಿಗೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. - ಡಾ.ಅರುಣ್ ಕುಮಾರ್ ಶೆಟ್ಟಿ, ಉಪನಿರ್ದೇಶಕ, ಪಶು ಸಂಗೋಪನಾ ಇಲಾಖೆ ದ.ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net