ಎಸ್ಎಲ್ ಭೈರಪ್ಪ ನಿಧನ: ಬೆಂಗಳೂರಲ್ಲಿ ನಾಳೆ ಮಧ್ಯಾಹ್ನದವರೆಗೆ ಅಂತಿಮ ದರ್ಶನ, ಶುಕ್ರವಾರ ಮೈಸೂರಲ್ಲಿ ಅಂತ್ಯಕ್ರಿಯೆ! SL Bhyarappa

SL Bhyarappa
Published on

SL Bhyarappa: ವಯೋಸಹಜ ಕಾಯಿಲೆಯಿಂದ ಇಂದು ಇಹಲೋಕ ತ್ಯಜಿಸಿದ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಸಾಹಿತಿ, ಪದ್ಮಭೂಷಣ ಗೌರವ ಪುರಸ್ಕೃತ ಎಸ್​.ಎಲ್​. ಭೈರಪ್ಪ ಅವರ ಅಂತ್ಯಕ್ರಿಯೆ ಶುಕ್ರವಾರ (ಸೆ.26) ಮೈಸೂರಿನಲ್ಲಿ ನಡೆಯಲಿದೆ.

ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ಮೈಸೂರಿನಲ್ಲಿ ನಡೆಸುವುದಾಗಿ ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದು, ನಾಳೆಯವರೆಗೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಅವರ ಹಿರಿಯ ಪುತ್ರ ವಿದೇಶದಿಂದ ಬರುತ್ತಿದ್ದು, ಬಂದ ನಂತರ ಅಂತ್ಯಕ್ರಿಯೆ ನೆರವೇರಲಿದೆ.

ಶುಕ್ರವಾರ (ಸೆ.26) ಮಧ್ಯಾಹ್ನ ಮೈಸೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ನಾಳೆ ಮಧ್ಯಾಹ್ನದವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪಾರ್ಥೀವ ಶರೀರವನ್ನು ಮೈಸೂರಿಗೆ ಕೊಂಡೊಯ್ಯಲಾಗುತ್ತದೆ. ಶುಕ್ರವಾರ ಮಧ್ಯಾಹ್ನದವರೆಗೆ ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮಾಹಿತಿ ನೀಡಿದ್ದಾರೆ.

ಭೈರಪ್ಪ ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​. ಎಲ್​. ಭೈರಪ್ಪ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ಶ್ರೀ ಎಸ್.ಎಲ್. ಭೈರಪ್ಪ ಜಿ ಅವರ ನಿಧನ ನಮ್ಮ ಆತ್ಮಸಾಕ್ಷಿಯನ್ನು ಕಲಕಿದೆ. ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಒಬ್ಬ ಮಹಾನ್ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಅಲ್ಲದೆ, ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಭೈರಪ್ಪನವರು ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಆಳವಾಗಿ ಶ್ರೀಮಂತಗೊಳಿಸಿದ್ದರು. ಇವರ ಬರಹಗಳು ಪೀಳಿಗೆಗಳನ್ನು ಸಮಾಜವನ್ನು ಪ್ರತಿಬಿಂಬಿಸಲು, ಪ್ರಶ್ನಿಸಲು ಮತ್ತು ಇದರೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು ಎಂದು ಮೋದಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಅಲ್ಲದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಭೈರಪ್ಪನವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಅಂದಹಾಗೆ, ಭೈರಪ್ಪ ಅವರ ಪೂರ್ಣ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂದು. ಕನ್ನಡ ಸಾಹಿತ್ಯ ಲೋಕದ ದಿಗ್ಗಜ ವ್ಯಕ್ತಿಯಾಗಿದ್ದರು. 1931ರ ಆಗಸ್ಟ್ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಸಣ್ಣ ವಯಸ್ಸಿನಲ್ಲೇ ತಮ್ಮ ತಾಯಿಯ ಧೀಮಂತಿಕೆಯನ್ನು ಭೈರಪ್ಪ ಅವರು ಮೈಗೂಡಿಸಿ ಕೊಂಡು ಬೆಳೆದರು. ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.

ಶಿಕ್ಷಣ ಮುಗಿಸಿದ ಬಳಿಕ ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಅದರ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದರು. 1961ರಲ್ಲಿ ಧರ್ಮಶ್ರೀ ಕಾದಂಬರಿ ಪ್ರಕಟಿಸಿದರು. ಇದುವರೆಗೆ ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ.

ಕರ್ನಾಟಕದ ಗ್ರಾಮೀಣ ಜೀವನದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ಆಳವಾಗಿ ಅರಿತುಕೊಂಡು ಬೆಳೆದ ಅವರ ಜೀವನವು ಅವರ ಕೃತಿಗಳಲ್ಲಿ ಪ್ರತಿಫಲಿಸುತ್ತದೆ. ಎಸ್.ಎಲ್. ಭೈರಪ್ಪ ಅವರು ಕನ್ನಡದಲ್ಲಿ 25 ವರ್ಷಗಳಿಂದಲೂ ಬೆಸ್ಟ್ ಸೆಲ್ಲಿಂಗ್ ಕಾದಂಬರಿಕಾರರಾಗಿ ಖ್ಯಾತರಾಗಿದ್ದರು. ಅವರ ಕೃತಿಗಳು ತಾತ್ವಿಕ ಆಳ ಮತ್ತು ಸಾಮಾಜಿಕ ವಿಮರ್ಶೆಯಿಂದ ಕೂಡಿವೆ. ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲ ಸಾಕಷ್ಟು ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದಗೊಂಡಿವೆ. ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.

ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975 ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪರ್ವ ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ.

1999ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು. ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net