ಹಿರಿಯ ನಟ ಸುಂದರ್‌ರಾಜ್‌ಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ

17bdvt1
ಭದ್ರಾವತಿಯಲ್ಲಿ ಹಿರಿಯ ನಟ ಸುಂದರ್‌ರಾಜ್ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಹಾಗೂ ಅಪೇಕ್ಷಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಪೇಕ್ಷ ಮಂಜುನಾಥ್, ಎಚ್.ಉಮೇಶ್, ಎಸ್.ಮಣಿಶೇಖರ್ ಇತರರಿದ್ದರು.
Published on

ಭದ್ರಾವತಿ: ಜೀವನದಲ್ಲಿ ಎಲ್ಲವೂ ನಮಗೆ ಸಿಗಲು ಹಿರಿಯರ, ಗುರುಗಳ, ಸಹೋದ್ಯೋಗಿಗಳ ಸಹಕಾರ ಹಾಗೂ ಆಶೀರ್ವಾದವೇ ಕಾರಣ ಎಂದು ಹಿರಿಯ ನಟ ಸುಂದರ್‌ರಾಜ್ ಹೇಳಿದರು.

ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಅಪೇಕ್ಷಾ ನೃತ್ಯ ಕಲಾವಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ವಿಷ್ಣುವರ್ಧನ್ ಹಾಗೂ ಅಪೇಕ್ಷಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮಲ್ಲಿರುವ ಅಹಂಕಾರವನ್ನು ಬಿಟ್ಟಾಗ ಸ್ನೇಹ, ಸಂಬಂಧ ಬೆಳೆಯುತ್ತದೆ. ಅಂತಹ ಸಂಬಂಧಗಳಿಗೆ ಬೆಲೆಕೊಟ್ಟು ಬದುಕುತ್ತಿದ್ದ ವ್ಯಕ್ತಿ ಡಾ. ವಿಷ್ಣುವರ್ಧನ್. ಬಲಗೈನಲ್ಲಿ ಮಾಡಿದ ಸಹಾಯ ಎಡಗೈಗೆ ತೋರಿಸಿಕೊಳ್ಳದ ವ್ಯಕ್ತಿತ್ವ ಹೊಂದಿದ್ದ ವಿಷ್ಣುವರ್ಧನ್ ಸರಳ, ಸಜ್ಜನಿಕೆಯ ಕರ್ನಾಟಕ ಕಂಡ ಹೆಮ್ಮೆಯ ಪುತ್ರ ಎಂದರು.
ನಾನು ವಿಷ್ಣುವರ್ಧನ್ ಸಣ್ಣ ವಯಸ್ಸಿನಿಂದ ಸ್ನೇಹಿತರು. ನಾವಿಬ್ಬರೂ ಒಟ್ಟಾಗಿ ಚಲನಚಿತ್ರ ರಂಗ ಪ್ರವೇಶಿಸಿದೆವು. ಆದರೆ ನನಗಿಂತ ಮೊದಲೇ ಅವರು ಇಹಲೋಕ ತ್ಯಜಿಸಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಭಾವುಕರಾದರು.
ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್‌ರಾಜ್, ತಮ್ಮ ಹಾಗೂ ವಿಷ್ಣುವರ್ಧನ್ ನಡುವಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಅಪೇಕ್ಷ ನೃತ್ಯ ಕಲಾವೃಂದದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ, ಕಾರ್ಯದರ್ಶಿ ಅಪೇಕ್ಷ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಜಿಪಂ ಮಾಜಿ ಸದಸ್ಯ ಎಸ್.ಮಣಿಶೇಖರ್, ಡಾ. ವಿಷ್ಣುವರ್ಧನ್ ದತ್ತುಪುತ್ರ ಶ್ರೀಧರ್, ಸ್ನೇಹಜೀವಿ ಉಮೇಶ್, ವೆಂಕಟರಮಣ ಶೇಟ್, ಬಸವೇಶ್ವರ ಧರ್ಮಸಂಸ್ಥೆಯ ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net