

ಬೆಂಗಳೂರು: ಅಪರಿಚಿತ ವ್ಯಕ್ತಿಗಳು ಎಟಿಎಮ್ನಿಂದ ಲಕ್ಷಾಂತರ ರೂಪಾಯಿ ಮೇಲಿಂದ ಮೇಲೆ ಡ್ರಾ ಮಾಡಿದ್ದು, ಯಾವ ಖಾತೆಯಿಂದ ಹಣ ಕಡಿತವಾಗಿದೆ ಎಂಬುದನ್ನು ಪತ್ತೆ ಮಾಡಲಾಗದಿರುವುದು ಬ್ಯಾಂಕ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.
ಲೆಕ್ಕಕ್ಕೆ ಸಿಗದಂತೆ ಕೆನರಾ ಬ್ಯಾಂಕ್ ಎಟಿಎಮ್ನಿಂದ ಕಳವಾಗಿದ್ದು 1.7 ಲಕ್ಷ ರೂ. ಡ್ರಾ ಆಗಿದೆ. ಈ ಕುರಿತು ಎಂ.ಜಿ.ರಸ್ತೆ ಕೆನರಾ ಬ್ಯಾಂಕ್ ವೃತ್ತ ಕಚೇರಿ ಅಧಿಕಾರಿ ಬಾಬು ಮಹೇಶ್ ಕುಮಾರ್ ಎಂಬುವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಲಸೂರಿನಲ್ಲಿ ಇರುವ ಕೆನರಾ ಬ್ಯಾಂಕ್ ಎಟಿಎಮ್ನಲ್ಲಿ ಅಪರಿಚಿತರು ಐದು ಬಾರಿ ಒಟ್ಟಾರೆ 50 ಸಾವಿರ ರೂ., ಬಿಲ್ಲಕೋಟೆ ಎಟಿಎಮ್ನಲ್ಲಿ 50 ಸಾವಿರ ರೂ., ಕುಲುವನಹಳ್ಳಿ ಎಟಿಎಮ್ನಲ್ಲಿ 70 ಸಾವಿರ ರೂ. ಒಟ್ಟಾರೆ 1.7 ಲಕ್ಷ ರೂ. ಬೇರೆ ಬೇರೆ ದಿನಾಂಕದಂದು ಡ್ರಾ ಮಾಡಿಕೊಂಡಿದ್ದಾರೆ.
ಆದರೆ, ಯಾರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿದೆ ಎಂಬುದು ಮಾತ್ರ ನೋಂದಣಿ ಆಗಿಲ್ಲ. ಬದಲಿಗೆ ಎಟಿಎಮ್ನಲ್ಲಿ ಹಣ ಡ್ರಾ ಆಗಿದೆ. ಇದು ಇತ್ತೀಚೆಗೆ ಬ್ಯಾಂಕ್ ಲೆಕ್ಕಪತ್ರಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಎಟಿಎಮ್ ಬೂತ್ ಸೆಕ್ಯುರಿಟಿ ಏಜೆನ್ಸಿ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅಪರಿಚಿತ ವ್ಯಕ್ತಿ ಹಣ ಡ್ರಾ ಮಾಡಿರುವುದು ಖಚಿತವಾಗಿದೆ.
ಇದೇ ರೀತಿ ಹಲವು ಬ್ಯಾಂಕ್ ಎಟಿಎಮ್ನಲ್ಲಿ ನಡೆದಿದೆ. ಇಲ್ಲಿಯವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.