

ಮುಂಡರಗಿ: ವಚನಗಳು ಪರಿಶುದ್ಧ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ದಾರಿದೀಪವಾಗುತ್ತವೆ. ವಚನ ಸಾಹಿತ್ಯವನ್ನು ಸದಾಕಾಲ ಓದಬೇಕು. ಶರಣರ ವಚನ ದರ್ಶನ ಪ್ರವಚನ ಕೇಳಿ ಧನ್ಯಾತ್ಮರಾಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ 155ನೇ ಯಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೊಳಲು ಶ್ರೀ ಚನ್ನಬಸವ ದೇವರು ಮಾತನಾಡಿ, ಹಲವು ವರ್ಷಗಳಿಂದ ವಿಶೇಷವಾಗಿ ಜಾತ್ರಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ವಚನ ಸಾಹಿತ್ಯವು ಮನಸ್ಸನ್ನು ಅರಳಿಸುತ್ತದೆ. ಮನುಷ್ಯ ಸನ್ಮಾರ್ಗದ ಚಿಂತನೆಯತ್ತ ಸಾಗಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಆರ್.ಎಲ್. ಪೊಲೀಸಪಾಟೀಲ ಮಾತನಾಡಿ, ವೀರಶೈವ-ಲಿಂಗಾಯತ ಮಠಗಳು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಬಹಳಷ್ಟು ಕೊಡುಗೆ ನೀಡಿವೆ. ಶರಣರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಸದೃಢ, ಆರೋಗ್ಯ ಪೂರ್ಣ ವಚನ ರಚಿಸಿ ಸಮಾಜ ಸುಧಾರಣೆಗೆ ಕೆಲಸ ಮಾಡಿದ್ದಾರೆ ಎಂದರು.
ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ ಹಿರೇಮಠ ಪ್ರವಚನ ನಡೆಸಿಕೊಟ್ಟರು. ಯಾತ್ರಾ ಕಮಿಟಿ ಅಧ್ಯಕ್ಷ ವಿ.ಜಿ. ಹಿರೇಮಠ, ಉಪಾಧ್ಯಕ್ಷರಾದ ದೇವು ಹಡಪದ, ಮುದಿಯಪ್ಪ ಕುಂಬಾರ, ಕಾರ್ಯದರ್ಶಿ ಶಿವು ನಾಡಗೌಡ್ರ, ಸಹಕಾರ್ಯದರ್ಶಿ ಶಿವು ವಾಲಿಕಾರ, ಖಜಾಂಚಿ ನಾಗರಾಜ ಮುರಡಿ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ಎಂ.ಜಿ. ಗಚ್ಚಣ್ಣವರ ಉಪಸ್ಥಿತರಿದ್ದರು. ಸೋಮನಾಥ ಗವಾಯಿಗಳು, ನಾಗಭೂಷಣ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಮುಖ್ಯಶಿಕ್ಷಕ ಎಸ್.ಆರ್.ರಿತ್ತಿ ನಿರ್ವಹಿಸಿದರು.