

ಬೆಳಗಾವಿ: ವೃತ್ತಿ ಮತ್ತು ಪ್ರವೃತ್ತಿ ಎರಡನ್ನೂ ನಿಭಾಯಿಸುತ್ತಿರುವ ಡಾ.ಸೋನಾಲಿ ಸರ್ನೋಬತ್ ಅವರು ಆರೋಗ್ಯ ಸೇವೆ ಜತೆಗೆ ಶಿಕ್ಷಣ, ರಾಜಕೀಯ, ಸಮಾಜಸೇವೆ ಮೂಲಕ ತಮ್ಮದೇ ಆದ ವಿಶೇಷ ಛಾಪು ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಮಾಜಸೇವೆಯನ್ನು ಮತ್ತಷ್ಟು ಪರಿಣಾಮಕಾರಿ ಮಾಡುವುದಕ್ಕೆ ರಾಜಕೀಯ ಪ್ರವೇಶ ಮಾಡಿ, ರಾಜಕೀಯದಲ್ಲೂ ಯಶಸ್ವಿಯಾಗಿರುವುದು ವಿಶೇಷ. ಇವರ ಕಾಯಕ ನಿಷ್ಠೆ, ಜನಪರ ಕೆಲಸ, ಸಾಮಾಜಿಕ ಜಾಗೃತಿ ಚಟುವಟಿಕೆಗಳ ಫಲವಾಗಿ ಅವರಿಂದು ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದಾರೆ. ನಗರ, ಗ್ರಾಮೀಣ ಪ್ರದೇಶಗಳಲ್ಲಿನ ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಸಹೃದಯಿ. ಅನ್ಯಾಯಕ್ಕೊಳಗಾದವರಿಗೆ ಶಾಶ್ವತ ನೆಲೆ ಕಲ್ಪಿಸಲು ವಿಶಿಷ್ಟ ರೀತಿಯ ಹೋರಾಟ ಹಮ್ಮಿಕೊಳ್ಳುವ ಮೂಲಕ ನೊಂದವರ ನೋವಿಗೆ ಧ್ವನಿಯಾಗಿದ್ದಾರೆ.
ಫೌಂಡೇಷನ್ ಮೂಲಕ ಕಾರ್ಯ: ಮಹಿಳೆಯರಿಗೆ ಕೌಶಲ ತರಬೇತಿ ಸ್ವಂತ ಉದ್ಯೋಗ ಆರಂಭಿಸಲು ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಆರಂಭಿಸಲು ಸರ್ಕಾರದ ಮೂಲಕ ಪ್ರಯತ್ನಿಸುತ್ತಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶೋಷಿತರಿಗೆ ಹಾಗೂ ಬಡವರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಮಾಡಲೆಂದು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ನಿಯತಿ ಫೌಂಡೇಷನ್ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಈ ಫೌಂಡೇಷನ್, ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವಲ್ಲೂ ಮುಂಚೂಣಿಯಲ್ಲಿರುವುದು ಗಮನಾರ್ಹ. ನಿಯತಿ ಫೌಂಡೇಷನ್ ಸಂಸ್ಥೆ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅಧ್ಯಯನಕ್ಕಾಗಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ವಿತರಿಸುವ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಸೇರಿದ ನಂತರ ಡಾ.ಸೋನಾಲಿ ಅವರು, ಸಮಾಜ ಸೇವೆಗೆ ಮತ್ತಷ್ಟು ವೇಗ ನೀಡಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಹೆಚ್ಚಿನ ಜನರನ್ನು ತಮ್ಮ ಪಕ್ಷಕ್ಕೆ ಸೇರುವಂತೆ ಮಾಡುತ್ತಿದ್ದಾರೆ. ಆ ಮೂಲಕ ಅತ್ಯುತ್ತಮ ಸಂಘಟಕರಾಗಿಯೂ ಹೊರಹೊಮ್ಮುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಮರಾಠಿ ಮತ್ತು ಹಿಂದಿಯಲ್ಲಿ ಮಾತನಾಡುವ ಕೌಶಲ ಹೊಂದಿದ್ದು, ಜನಸಾಮಾನ್ಯರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದಾರೆ. ಸದ್ಯ ಬಿಜೆಪಿಯಲ್ಲಿ ಮಹಿಳಾ ಐಕಾನ್ ಎಂದು ಗುರುತಿಸಿಕೊಂಡಿದ್ದಾರೆ. 2018ರ ಎಂಎಲ್‌ಎ ಮತ್ತು 2019ರ ಎಂಪಿ ಚುನಾವಣೆ ಸಮಯದಲ್ಲಿ 355 ಮಹಿಳಾ ಮಂಡಳನ್ನು ಸಂಘಟಿಸಿದ್ದಾರೆ. ಬೆಳಗಾವಿ ಲೋಕಸಭೆ ಉಪಚುನಾವಣೆ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಿಳಾ ಮೋರ್ಚಾ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ.
ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಡಾ.ಸೋನಾಲಿ ಅವರು, ವಿಶೇಷ ಜಾಣ್ಮೆಗೆ ಹೆಸರಾಗಿದ್ದರು. ವಿಶ್ವವಿದ್ಯಾನಿಲಯದ ಚಿನ್ನದ ಪದಕ ವಿಜೇತೆಯೂ ಆಗಿದ್ದಾರೆ. ಲಂಡನ್ ಹೋಮಿಯೋಪಥಿ ವಿಶ್ವವಿದ್ಯಾಲಯದಲ್ಲಿ ಹೋಮಿಯೋಪಥಿ ಮತ್ತು ಪರ್ಯಾಯ ಔಷಧಗಳಿಗೆ ಮೀಸಲಾಗಿರುವ ಪಿಜಿ ಕೋರ್ಸ್ ವ್ಯಾಸಂಗ ಮಾಡಿದ್ದಾರೆ. ಸ್ಮಾರ್ಟ್‌ಸಿಟಿ ಬೆಳಗಾವಿಗೆ ಸಲಹೆಗಾರರಾಗಿದ್ದ ಅವರು, ಮೊದಲ ಹಂತದಲ್ಲಿ ಆರೋಗ್ಯ ಕೇಂದ್ರಗಳ ಯೋಜನೆ ಮತ್ತು ಸ್ಮಾರ್ಟ್ ಸಿಟಿಯ ಕೆಲವು ಯೋಜನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ನಿಯತಿ ಫೌಂಡೇಷನ್ ಮೂಲಕ ಹಿಂದುಳಿದ ಪ್ರದೇಶಗಳಲ್ಲಿನ ಜನರ ಆರೋಗ್ಯ ಕಾಳಜಿಯಿಂದ ನಿರಂತರವಾಗಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳುತ್ತಿದ್ದಾರೆ. 2016ರಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಹ-ಸಂಚಾಲಕರಾಗಿ ನೇಮಕಗೊಂಡ ನಂತರ ಡಾ. ಸೋನಾಲಿ ಅವರು ವೈದ್ಯಕೀಯ ಶಿಬಿರಗಳಿಗೆ ಮತ್ತಷ್ಟು ವೇಗ ನೀಡಿದ್ದಾರೆ. ಒಂದು ಲಕ್ಷ ಕುಟುಂಬಗಳಿಗೆ ಬಿಜೆಪಿ ವೈದ್ಯಕೀಯ ವಿಭಾಗದಿಂದ ಹೋಮಿಯೋಪಥಿಕ್ ಪ್ರತಿಬಂಧಕ ಔಷಧ ವಿತರಿಸಿದ್ದಾರೆ. ಬೆಳಗಾವಿ ಗ್ರಾಮೀಣ ಭಾಗಗಳಲ್ಲಿ ಮತ್ತು ಖಾನಾಪುರ ಮಂಡಲ ಸೇರಿ ಕುಡಚಿಯಲ್ಲೂ ಸ್ಯಾನಿಟೈಸರ್, ಮಾಸ್ಕ್, ದಿನಸಿ ಕಿಟ್ ಮತ್ತು ಔಷಧ ವಿತರಿಸಿದ್ದಾರೆ. ಪೊಲೀಸರಿಗೂ ಸಹ ಪಿಪಿಇ ಕಿಟ್, ಎನ್95 ಮಾಸ್ಕ್‌ಗಳನ್ನು ಅಂದಿನ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ಹಸ್ತಾಂತರಿಸುವ ಮೂಲಕ ಆರಕ್ಷಕರ ರಕ್ಷಣೆಗೂ ಸ್ಪಂದಿಸಿದ್ದಾರೆ.
ಖಾನಾಪುರ ಮತ್ತು ಬೆಳಗಾವಿ ಗ್ರಾಮೀಣ ತಾಲೂಕಿನ ಕುಗ್ರಾಮಗಳಿಗೆ ಎಲ್ಲ ಸೌಲಭ್ಯ ಒದಗಿಸಿ, ಆಧುನಿಕ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುತ್ತಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಂತೆ ಕಾರ್ಯೋನ್ಮುಖರಾಗಿದ್ದಾರೆ. ಕೆಲವು ಕುಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿ ಇರಲಿಲ್ಲ. ಅಲ್ಲಿನವರು ಸರ್ಕಾರಿ ಪಡಿತರ ಪಡೆಯಲು ಹತ್ತಿರದ ಪಟ್ಟಣಕ್ಕೆ 10 ಕಿಮೀ ಕಾಲ್ನಡಿಗೆ ಮೂಲಕವೇ ತೆರಳಬೇಕಿತ್ತು. ಬೇರೆ ಮಾರ್ಗಗಳಿರಲಿಲ್ಲ. ಸಂಬಂಧಪಟ್ಟ ಸಚಿವರು ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ವಾರಕ್ಕೊಮ್ಮೆ ಆ ಗ್ರಾಮಗಳಲ್ಲಿ 25 ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಿ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಿಸಿದರು.
ಕರೊನಾ ವೇಳೆ ಖಾನಾಪುರ ತಾಲೂಕಿನ 1 ಲಕ್ಷ ಕುಟುಂಬಗಳಿಗೆ ಇಮ್ಯುನೊಬೂಸ್ಟರ್‌ಗಳ ವಿತರಣೆ, 2019ರ ಪ್ರವಾಹದಲ್ಲಿ ಅಗತ್ಯವಿರುವವರಿಗೆ ನೈರ್ಮಲ್ಯ ಉಪಯುಕ್ತತೆ ಮತ್ತು ದಿನಸಿ ವಸ್ತುಗಳ ವಿತರಣೆ, 2020-21ರಲ್ಲಿ ಕರೊನಾ 5000 ಕುಟುಂಬಗಳಿಗೆ ದಿನಸಿ ಕಿಟ್‌ಗಳ ವಿತರಣೆ ಮಾಡಿದ್ದಾರೆ.
ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಹೊಂದಿರುವ ಮತ್ತು ಕಾನನದ ಅಂಚಿನಲ್ಲಿರುವ ಖಾನಾಪುರ ತಾಲೂಕಿನ ಸುದೀರ್ಘ 60 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಅಭಿವೃದ್ಧಿಗಿಂತ ಮರಾಠಿ ಮತ್ತು ಕನ್ನಡ ಭಾಷಾ ರಾಜಕಾರಣದ ಹೆಸರಿನಲ್ಲಿ ಚುನಾವಣೆಗಳು ನಡೆದುಕೊಂಡು ಬರುತ್ತಿವೆ. ಈ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ, ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಡಾ.ಸೋನಾಲಿ ಸರ್ನೋಬತ್ ಹೆಚ್ಚು ಆಸಕ್ತಿ ವಹಿಸುತ್ತಿರುವುದು ವಿಶೇಷ ಎನ್ನಲಾಗಿದೆ.
ಆಯುರ್ವೇದ ಉತ್ಪಾದನಾ ಘಟಕ, ಹೋಮಿಯೋಪಥಿ ಉತ್ಪಾದನಾ ಘಟಕ, ಉತ್ಪಾದನೆ ಮತ್ತು ಇ-ಕಾಮರ್ಸ್ ವೆಬ್‌ಸೈಟ್ ಮುಖ್ಯಸ್ಥೆಯಾಗಿದ್ದಾರೆ. ಲ್ಯಾಕ್ಟೋಬಾಸಿಲಸ್ ಮತ್ತು ಹೋಮಿಯೋಪಥಿ ಚಿಕಿತ್ಸೆಯಲ್ಲಿ ವ್ಯಾಪಕ ಸಂಶೋಧನೆ ನಡೆಸಿದ್ದು, ುಲಬಾಗ ಗಲ್ಲಿಯ ಕೇದಾರ ಕ್ಲಿನಿಕ್ ಮೂಲಕ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಗೋವಾವೇಸ್‌ನಲ್ಲಿ ಡಾ.ಸರ್ನೋಬತ್ಸ್ ಕ್ಲಿನಿಕ್, ಸಂಶೋಧನಾ ಕೇಂದ್ರ ನಡೆಸುತ್ತಿದ್ದಾರೆ.
ಜಾತಿ, ಧರ್ಮ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ರಾಜಕೀಯ ಹೀಗೆ ಎಲ್ಲ ಕ್ಷೇತ್ರದಲ್ಲೂ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಡಾ.ಸೋನಾಲಿ ಸರ್ನೋಬತ್ ಅವರು, ಸರ್ವಜನಾಂಗದ ಸೇವಕಿಯಾಗಿ ಸಾಬೀತುಪಡಿಸಿದ್ದಾರೆ. ಆ ಮೂಲಕ ಭವಿಷ್ಯದ ಜನನಾಯಕಿ ಎಂಬ ಭರವಸೆ ಮೂಡಿಸಿದ್ದಾರೆ. ಅವರ ಉದಾರತೆ ಹಾಗೂ ಸಾಮಾಜಿಕ ಕಳಕಳಿ ಇಂದಿನ ಯುವ ಜನಾಂಗಕ್ಕೆ ನಿಜಕ್ಕೂ ಮಾದರಿ. ಯಾರೇ ಆಗಲಿ ಸಮಸ್ಯೆ ಎಂದು ಕರೆ ಮಾಡಿದರೆ ಅದನ್ನು ಪರಿಹರಿಸುವವರೆಗೆ ವಿರಮಿಸದ ವ್ಯಕ್ತಿತ್ವ ಅವರದು. ಜತೆಗೆ ಮಹಿಳೆಯರ ಹಕ್ಕು ಹಾಗೂ ಗೌರವಕ್ಕೆ ಧಕ್ಕೆ ಬಂದ ಸಂದರ್ಭಗಳಲ್ಲಿ ಮಹಿಳೆಯರ ಧ್ವನಿಯಾಗಿ, ಪ್ರತಿರೋಧಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ತಮ್ಮ ವೃತ್ತಿ, ಪ್ರವೃತ್ತಿ ಎರಡನ್ನೂ ನಿಭಾಯಿಸುತ್ತಿರುವ ಡಾ. ಸೋನಾಲಿ ಸರ್ನೋಬತ್ ಅವರು ಖಾನಾಪುರ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಂಡಿದ್ದಾರೆ. ನಿಯತಿ ಫೌಂಡೇಷನ್ ಮೂಲಕ ಸದಾ ಒಂದಿಲ್ಲೊಂದು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಅವರು, ಕರ್ಮಯೋಗಿ ಎಂದರೆ ಅತಿಶಯೋಕ್ತಿಯಲ್ಲ.
ಡಾ.ಸೋನಾಲಿ ಸರ್ನೋಬತ್ ಉತ್ತಮ ಲೇಖಕಿಯೂ ಆಗಿದ್ದಾರೆ. 3 ಪುಸ್ತಕ ಪ್ರಕಟಿಸಿದ್ದು, ಅವರ ಮರಾಠಿ ಪತ್ರಿಕೆಯ ಅಂಕಣ ‘ಆರೋಗ್ಯ ಮಂತ್ರ’ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿದೆ. ‘ಸ್ಮಾರ್ಟ್ ಸಿಟಿ, ಬೀಯಿಂಗ್ ಸ್ಮಾರ್ಟ್’ ಪುಸ್ತಕ ಬರೆದಿದ್ದಾರೆ. ವೈಜ್ಞಾನಿಕವಾಗಿ ಕೆಲವು ರೋಗಗಳಿಗೆ ಯಾವ ಆಹಾರ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ‘ಡಯಟ್ ಆ್ಯಂಡ್ ಮಿ’ ಎಂಬ ಪುಸ್ತಕದ ಮೂಲಕ ಬೆಳಕು ಚೆಲ್ಲಿದ್ದಾರೆ.
ವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ನಡೆಸಲು ಬೆಂಬಲಿಸಿದ್ದಾರೆ. ಕರೊನಾ ಸಂದರ್ಭದಲ್ಲಿ ಅನೇಕ ನಿರ್ಗತಿಕರಿಗೆ, ಅಸಹಾಯಕರಿಗೆ ನಿಯತಿ ಫೌಂಡೇಷನ್ ಮೂಲಕ ಸಹಾಯ ಮಾಡಿ, ಆಸರೆ ಒದಗಿಸಿದ್ದಾರೆ. ಮಾನವೀಯತೆ ಎಂಬ ಪ್ರಶ್ನೆ ಬಂದರೆ ಡಾ.ಸೋನಾಲಿ ಸರ್ನೋಬತ್ ಅವರು ಪುರುಷ, ಮಹಿಳೆ, ಮಕ್ಕಳು, ಪ್ರಾಣಿ-ಪಕ್ಷಿ, ರಾಜ್ಯ-ಹೊರರಾಜ್ಯಗಳ ಹಂಗಿಲ್ಲದೆ ಸಹಾಯ ಹಸ್ತ ಚಾಚುವ ಮನಸ್ಸು ಇವರದ್ದು. ಇದೇ ಕಾರಣಕ್ಕೆ ಸೋನಾಲಿ ಸರ್ನೋಬ್ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು.
ನಕಾರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಖಿನ್ನತೆಗೊಳಗಾಗುವ ಮಕ್ಕಳನ್ನು ಪ್ರೇರೇಪಿಸುವ ಕಾರ್ಯ ಮಾಡುತ್ತಿದ್ದಾರೆ. ಪರೀಕ್ಷಾ ಭಯ ಮತ್ತು ಇತರ ಕಾರಣಗಳಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದಕ್ಕೆ ‘ಮಿಷನ್ ನೋ ಸೂಸೈಡ್’ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಹದಿಹರೆಯದ ಹುಡುಗಿಯರಲ್ಲಿ ಮುಟ್ಟಿನ ಜಾಗೃತಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದಾದ್ಯಂತ ಹಲವು ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಇವರ ಕಾರ್ಯಗಳಿಗೆ ಪತಿ ಸಮೀರ್ ಸರ್ನೋಬತ್ ಹಾಗೂ ಕುಟುಂಬಸ್ಥರು ಬೆನ್ನೆಲುಬಾಗಿ ನಿಂತಿದ್ದಾರೆ.
ವೈದ್ಯ ವೃತ್ತಿ ಜತೆ ಸಮಾಜಸೇವೆ, ರಾಜಕೀಯದಲ್ಲೂ ಸಕ್ರಿಯವಾಗಿರುವ ಡಾ.ಸೋನಾಲಿ ಸರ್ನೋಬತ್ ನಿಜವಾಗಿಯೂ ಅದ್ಭುತ ಪ್ರತಿಭೆ. ಪರೋಪಕಾರ ಗುಣ, ಕಾಯಕ ನಿಷ್ಠೆ ಅಗಾಧವಾದದ್ದು. ವಿಜಯವಾಣಿ ವಿಜಯರತ್ನ ಪ್ರಶಸ್ತಿಗೆ ಭಾಜನವಾಗಿದ್ದು ಸಂತಸದ ಸಂಗತಿ. | ಡಾ. ಸಮೀರ್ ಸರ್ನೋಬತ್ ಪತಿ ಜನ ಸೇವೆ ಮಾಡಬೇಕು ಎಂಬ ಆಸೆ ನನ್ನದು. ಇದೇ ಕಾರಣಕ್ಕೆ ಸದಾ ಜನರ ಮಧ್ಯೆಯೇ ಇದ್ದು ಕಾರ್ಯ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಬೇಕು, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಆಸೆಯಿಂದ ಕಾರ್ಯೋನ್ಮುಖವಾಗಿ ಕೆಲಸ ಮಾಡುತ್ತಿದ್ದೇನೆ. ಅಷ್ಟೇ ಅಲ್ಲದೇ ನಿಯತಿ ಫೌಂಡೇಷನ್ ಮೂಲಕ ನೊಂದವರಿಗೆ ಕೈಲಾದಷ್ಟು ಸಹಾಯ, ಸಹಕಾರ ನೀಡುತ್ತಿದ್ದೇನೆ. ನನ್ನ ಎಲ್ಲ ಯಶಸ್ಸಿನ ಹಿಂದೆ ನನ್ನ ಕುಟುಂಬ ಸದಾ ಇದೆ. | ಡಾ. ಸೋನಾಲಿ ಸರ್ನೋಬತ್ ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ