

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿಯವರು "ಜನಾಕ್ರೋಶ ಯಾತ್ರೆ' ಮಾಡುತ್ತಾರಂತೆ. ನಿಮಗೆ ತಾಕತ್ತಿದ್ದರೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಆಕ್ರೋಶಕ್ಕೆ ತುತ್ತಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಭಟಿಸಿ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಸವಾಲು ಹಾಕಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರವೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುವ ಜನಾಕ್ರೋಶ ಯಾತ್ರೆಯು ತಮಗೆ ತಾವೇ ಕಪಾಳಮೋಕ್ಷ ಮಾಡಿಕೊಂಡಂತಾಗಿದೆ ಎಂದು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅನಗತ್ಯವಾಗಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವ ಕುರಿತು ಅವರ ಬಳಿ ಉತ್ತರವಿದೆಯೇ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ಸಹ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸುತ್ತಲೇ ಇರಲು ಕಾರಣವೇನು? ಕಾಂಗ್ರೆಸ್ನ ಗ್ಯಾರಂಟಿ ಯೋಜನೆ ಟೀಕಿಸುವ ಪ್ರಧಾನಿ ಮೋದಿ, ದೇಶದ ಜನತೆಗೆ ತಾನೇ ಗ್ಯಾರಂಟಿ ಎನ್ನುತ್ತಾರೆ. ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೋಟೆಲ್ ತಿಂಡಿಯೂ ಸಹ ಬೆಲೆ ಏರಿಕೆಯಾಗಲು ಮೋದಿಯೇ ಕಾರಣ. ಅವರ ಜನವಿರೋಧಿ ನೀತಿ ರಾಜ್ಯ ಬಿಜೆಪಿಯವರಿಗೆ ಕಾಣಿಸದೇ?
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಏರಿಕೆ ಮಾಡಿರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಇಳಿಸಲು ಯತ್ನಿಸಿ. ಇಲ್ಲಿದ್ದಲ್ಲಿ ಜನರೇ ನಿಮಗೆ ಬುದ್ಧಿ ಕಲಿಸುವ ದಿನ ದೂರವಿಲ್ಲ ಎಂದು ವೆರೋನಿಕಾ ತಿಳಿಸಿದ್ದಾರೆ.